

ಅಯೋಧ್ಯೆ: ಜನವರಿ 22 ಸೋಮವಾರವಷ್ಟೇ ಉದ್ಘಾಟನೆಗೊಂಡ ಅಯೋಧ್ಯಾ ಶ್ರೀರಾಮ ಮಂದಿರಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಜನವರಿ 23 ಮಂಗಳವಾರ ದಿನದ ಅಂತ್ಯಕ್ಕೆ ಎರಡೂವರೆ ಲಕ್ಷದಿಂದ ಮೂರು ಲಕ್ಷ ಭಕ್ತರು ರಾಮ ಮಂದಿರದಲ್ಲಿ ಭಗವಾನ್ ಶ್ರೀರಾಮನ ದರ್ಶನ ಪಡೆದಿರೋದಾಗಿ ಉತ್ತರ ಪ್ರದೇಶ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಇದನ್ನೂ ಓದಿ:ಕಾರು ಅಪಘಾತ: ಮಮತಾ ಬ್ಯಾನರ್ಜಿ ತಲೆಗೆ ಪೆಟ್ಟು
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಿಂದ ಉತ್ತರ ಪ್ರದೇಶ ಸರ್ಕಾರಕ್ಕೆ 4 ಲಕ್ಷ ಕೋಟಿ ರೂಪಾಯಿ ಆದಾಯ ಹರಿದುಬರಲಿದೆ ಎಂದು ಎಸ್ಬಿಐ ರಿಸರ್ಚ್ ಸಂಸ್ಥೆ ವರದಿ ಮಾಡಿದೆ.
ಅಯೋಧ್ಯೆಗೆ ಹೋಗಿ ಬಾಲರಾಮನನ್ನು ಕಣ್ತುಂಬಿಸಿಕೊಳ್ಳಬೇಕೆಂದು ಹಪಹಪಿಸುತ್ತಿರುವವರ ಸಂಖ್ಯೆ ಬಹಳ ದೊಡ್ಡದಿದೆ. ಇದು ಉತ್ತರಪ್ರದೇಶ ರಾಜ್ಯದ ಪ್ರವಾಸೋದ್ಯಮಕ್ಕೆ ಸಿಗಲಿರುವ ಭಾರೀ ಪುಷ್ಟಿಯ ವಿಚಾರವಾಗಿದೆ. ರಾಮ ಮಂದಿರ ಮತ್ತು ಇತರ ಪ್ರವಾಸೋದ್ಯಮ-ಕೇಂದ್ರಿತ ಉಪಕ್ರಮಗಳಿಂದಾಗಿ, ಈಗ ಎಸ್ಬಿಐ ರಿಸರ್ಚ್ ಸಂಸ್ಥೆಯ ವರದಿಯೊಂದರ ಪ್ರಕಾರ ರಾಮಮಂದಿರದ ಫಲವಾಗಿ ಉತ್ತರಪ್ರದೇಶಕ್ಕೆ ಒಂದು ವರ್ಷದಲ್ಲಿ 5,000 ಕೋಟಿ ರೂಪಾಯಿ ನಷ್ಟು ತೆರಿಗೆ ಲಾಭ ತರಬಹುದು ಎನ್ನಲಾಗಿದೆ.
2025ರ ಅಂತ್ಯದೊಳಗೆ ಉತ್ತರಪ್ರದೇಶದಲ್ಲಿ ಪ್ರವಾಸಿಗರು ಮಾಡುವ ವೆಚ್ಚ 4 ಲಕ್ಷ ಕೋಟಿ ರೂಪಾಯಿ ದಾಟಿ ಹೋಗಬಹುದು. 2024-25ರ ಹಣಕಾಸು ವರ್ಷದಲ್ಲಿ ಉತ್ತರಪ್ರದೇಶದ ತೆರಿಗೆ ಆದಾಯ 20,000 ದಿಂದ 25,000 ಕೋಟಿ ರೂಪಾಯಿನಷ್ಟು ಹೆಚ್ಚಾಗಬಹುದು ಎಂದು ಎಸ್ಬಿಐ ರಿಸರ್ಚ್ ಜನವರಿ 21ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಲಾಗಿದೆ. ಪ್ರವಾಸಿಗರ ಸಂಖ್ಯೆಯಲ್ಲಿ ಅಯೋಧ್ಯೆ ವ್ಯಾಟಿಕನ್ ಸಿಟಿ ಮತ್ತು ಮೆಕ್ಕಾವನ್ನು ಮೀರಿಸುತ್ತದೆ ಎಂದು ವಿದೇಶಿ ಷೇರು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಜೆಫರೀಸ್ ಹೇಳಿದೆ.
ಒಂದು ಕಾಲದಲ್ಲಿ ಬಿಮಾರು ರಾಜ್ಯಗಳಲ್ಲಿ ಒಂದೆಂದು ಹಂಗಿಸಲಾಗುತ್ತಿದ್ದ ಉತ್ತರಪ್ರದೇಶ ಈಗ ಬಹಳಷ್ಟು ಬೆಳವಣಿಗೆ ಕಾಣುತ್ತಿದೆ. 2028ರಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿ ಉತ್ತರಪ್ರದೇಶದ ಪಾತ್ರ ಮಹತ್ವದ್ದಿರಲಿದೆ. 2027ರಲ್ಲಿ 500 ಬಿಲಿಯನ್ ಡಾಲರ್ ಜಿಡಿಪಿ ಗಾತ್ರ ಮುಟ್ಟಬಹುದು ಎಂದು ನಿರೀಕ್ಷಿಸಲಾಗಿರುವ ಎರಡು ರಾಜ್ಯಗಳಲ್ಲಿ ಉತ್ತರಪ್ರದೇಶವೂ ಒಂದು. ಮಹಾರಾಷ್ಟ್ರ ಮತ್ತೊಂದು ರಾಜ್ಯವಾಗಿದೆ.
ಆಂಧ್ರಪ್ರದೇಶದ ತಿರುಪತಿ ಬಾಲಾಜಿ ದರ್ಶನಕ್ಕೆ ಪ್ರತಿ ವರ್ಷ 2.5 ಕೋಟಿ ಭಕ್ತರು ಬರಲಿದ್ದಾರೆ. ವಾರ್ಷಿಕವಾಗಿ 1200 ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆ. ವೈಷ್ಣೋ ದೇವಿಯ ದರ್ಶನವನ್ನು ವಾರ್ಷಿಕವಾಗಿ 80 ಲಕ್ಷ ಜನರು ಪಡೆಯುತ್ತಿದ್ದಾರೆ. ಈ ದೇವಸ್ಥಾನಕ್ಕೆ ಸುಮಾರು 500 ಕೋಟಿ ರೂಪಾಯಿ ಹಣ ಹರಿದು ಬರಲಿದೆ. ಆಗ್ರಾದಲ್ಲಿರುವ ತಾಜ್ಮಹಲ್ ವಾರ್ಷಿಕವಾಗಿ 100 ಕೋಟಿ, ಆಗ್ರಾ ಕೋಟೆ 27.5 ಕೋಟಿ ಆದಾಯ ಪಡೆಯುತ್ತಿದೆ.
ಈಗ ಧಾರ್ಮಿಕ ಸ್ಥಳಗಳಾದ ಅಯೋಧ್ಯೆ ಮತ್ತು ವಾರಾಣಸಿ ಉತ್ತರಪ್ರದೇಶದ ಪ್ರವಾಸೋದ್ಯಮಕ್ಕೆ ಪುಷ್ಟಿ ಕೊಡಲಿದ್ದು ಆರ್ಥಿಕತೆಯ ಬೆಳವಣಿಗೆಯ ವೇಗ ಹೆಚ್ಚಿಸಬಹುದು. ಉತ್ತರಪ್ರದೇಶದ ಆರ್ಥಿಕತೆ ನಾರ್ವೆಯಂತಹ ದೇಶವನ್ನು ಮೀರಿಸಬಹುದು ಎಂಬ ಅಂದಾಜಿದೆ.