ಅಯೋಧ್ಯೆಯ ಮಸೀದಿಗೆ ಸ್ವಾತಂತ್ರ್ಯ ಹೋರಾಟಗಾರನ ಹೆಸರು

ayodhya
Published on

ಅಯೋಧ್ಯೆ: ರಾಮ ಮಂದಿರದ ಜತೆ ಜತೆಗೆ ಅಯೋಧ್ಯೆಯಲ್ಲಿ ಮಸೀದಿಯೂ ನಿರ್ಮಾಣವಾಗುತ್ತಿದ್ದು, ಇದೀಗ ಮಸೀದಿಯ ಹೆಸರನ್ನು ನಿರ್ಧರಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕ್ರಾಂತಿಕಾರಿ ಮೌಲ್ವಿ ಅಹ್ಮದುಲ್ಲಾ ಷಾ ಫೈಜಾಬಾದಿ ಹೆಸರಿಡುವುದಾಗಿ ತಿಳಿಸಲಾಗಿದೆ.

ಈ ಕುರಿತಾಗಿ ಮಾತನಾಡಿರುವ ಇಂಡೋ ಇಸ್ಲಾಮಿಕ್​ ಕಲ್ಚರಲ್ ಫೌಂಡೇಷನ್ (ಐಐಸಿಎಫ್) ಕಾರ್ಯದರ್ಶಿ ಅಥರ್​ ಹುಸೇನ್​, ಮಸೀದಿಗೆ ಅಹ್ಮದುಲ್ಲಾ ಷಾ ಫೈಜಾಬಾದಿ ಅವರ ಹೆಸರು ಇಡಲು ಹುತಾತ್ಮರಾದ ದಿನದಂದು ನಿರ್ಧರಿಸಿದ್ದೇವೆ. ಪೂರ್ತಿ ಯೋಜನೆಗೆ ಅವರ ಹೆಸರಿಡಲಾಗುವುದು. ಅದರಲ್ಲಿ ಮಸೀದಿ, ಆಸ್ಪತ್ರೆ, ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರ ಹಾಗೂ ಸಮುದಾಯ ಅಡುಗೆ ಮನೆ ಬರಲಿದೆ ಎಂದು ತಿಳಿಸಿದ್ದಾರೆ.

1857ರ ದಂಗೆಯಲ್ಲಿ ಅಹ್ಮದುಲ್ಲಾ ಷಾ ಫೈಜಾಬಾದಿ ಅವರು ಕಾನ್ಪುರದ ನಾನಾ ಸಾಹೇಬ್, ಅರಾಹ್​ನ ಕುನ್ವರ್ ಸಿಂಗ್​ ಹಾಗೂ ಇನ್ನಿತರ ಜತೆ ಸೇರಿ ಹೋರಾಟ ನಡೆಸಿದ್ದರು. ಅವರನ್ನು ಬ್ರಿಟಿಷರು 164 ವರ್ಷಗಳ ಹಿಂದೆ ದೇಹ ಮತ್ತು ತಲೆ ಬೇರೆ ಬೇರೆ ಮಾಡಿ ವಿಭಿನ್ನ ಸ್ಥಳಗಳಲ್ಲಿ ಹೂಳಿದ್ದರು ಎಂದು ತಿಳಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net