

ಅಯೋಧ್ಯೆ: ಇಲ್ಲಿ ನಿರ್ವಣವಾಗಿರುವ ರಾಮಮಂದಿರದಲ್ಲಿ ರಾಮನವಮಿ ಆಚರಣೆಗೆ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ.
ರಾಮನವಮಿ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ಜನಸಂದಣಿ ನಿರ್ವಹಣೆಗೆ ಮತ್ತು ಟ್ರಾಫಿಕ್ ನಿರ್ವಹಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಬಾಲ ರಾಮನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಒಆರ್ಎಸ್ ಮಿಶ್ರಣವನ್ನು ವಿತರಿಸಲು ಜಿಲ್ಲಾಡಳಿತ ಸಿದ್ಧತೆ ನಡೆದಿದೆ. ಇದೇ ವೇಳೆ ಸರಯೂ ನದಿ ತೀರದಲ್ಲಿ 2 ಲಕ್ಷ ಹಣತೆಗಳನ್ನು ಬೆಳಗಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.
ಮಹಾಕುಂಭ ಮೇಳದ ವೇಳೆಗೆ ಭಕ್ತರ ದಟ್ಟಣೆ ನಿರ್ವಹಣೆಗೆ ತೆಗೆದುಕೊಂಡಿದ್ದ ಕ್ರಮಗಳನ್ನೇ ಈಗಲೂ ತೆಗೆದುಕೊಳ್ಳಲಾಗಿದೆ, ಭದ್ರತೆಗಾಗಿ ಉತ್ತರ ಪ್ರದೇಶ ಪೊಲೀಸರ ಜತೆ ಪ್ಯಾರಾಮಿಲಿಟರಿ ಪಡೆಗಳನ್ನೂ ನಿಯೋಜಿಸಲಾಗಿದೆ. ಸರಯೂ ನದಿ ಬಳಿ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ವಾಟರ್ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಯೋಧ್ಯೆ ವಲಯದ ಐಜಿ ಪ್ರವೀಣ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸ್ವಚ್ಛತೆ ಕಾಪಾಡಲು ಕ್ರಮ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸೂಚನೆ ಮೇರೆಗೆ ಅಯೋಧ್ಯೆಯಲ್ಲಿ ಸ್ವಚ್ಛತೆ ಕಾಪಾಡಲು ಸ್ವಚ್ಛತಾ ಸಿಬ್ಬಂದಿಯ ತಂಡವನ್ನು ನಿಯೋಜಿಸಲಾಗಿದ್ದು, ಅವರು ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಿದ್ದಾರೆ. ಶ್ರೀರಾಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಾಮನಮಿ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತರು ಆಗಮಿಸುವುದರಿಂದ ದರ್ಶನದ ವೇಳೆಯನ್ನು ವಿಸ್ತರಿಸಿದೆ.
ವಿಶೇಷ ಪಾಸ್ ರದ್ದು
ಭಕ್ತರಿಗೆ ರಾಮಲಲ್ಲಾ ದರ್ಶನಕ್ಕೆ ಅನುಕೂಲ ಮಾಡಿಕೊಡಲು ಬೆಳಗ್ಗೆ 9ರಿಂದ ಮಧ್ಯಾಹ್ನದವರೆಗೆ ವಿಶೇಷ ಪಾಸ್ಗಳನ್ನು ರದ್ದುಗೊಳಿಸಲಾಗಿದೆ. ಬಿಸಿಲಿನ ಝುಳದಿಂದ ಭಕ್ತರನ್ನು ರಕ್ಷಿಸಲು ರಾಮಮಂದಿರ, ಹನುಮಾನ್ ಗರ್ಹಿ ಬಳಿ ನೆರಳಿನ ವ್ಯವಸ್ಥೆ ಮಾಡಲಾಗಿದೆ. 14 ಸ್ಥಳಗಳಲ್ಲಿ ಅಗತ್ಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯೊಂದಿಗೆ ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ. 7 ಸ್ಥಳಗಳಲ್ಲಿ ಆಂಬ್ಯುಲೆನ್ಸ್ ನಿಯೋಜಿಸಲಾಗಿದೆ ಎಂದು ಅಯೋಧ್ಯೆ ವಲಯದ ಆಯುಕ್ತ ಗೌರವ್ ದಯಾಳ್ ತಿಳಿಸಿದ್ದಾರೆ.