ಗತವೈಭವದತ್ತ ಅಯೋಧ್ಯೆ: ಮಂದಿರ ನಿರ್ಮಾಣ ಶಿಲಾನ್ಯಾಸಕ್ಕೆ ಒಂದು ವರ್ಷ

Modi
Published on

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಜಾಗದಲ್ಲಿ ಮಂದಿರ ನಿರ್ಮಾಣಕ್ಕಾಗಿ 500 ವರ್ಷಗಳ ಸುದೀರ್ಘ ಹೋರಾಟ ನಡೆದಿದೆ. ಕೊನೆಗೂ, ಸುಪ್ರೀಂ ಕೋರ್ಟ್ ರಾಮ ಮಂದಿರ ನಿರ್ವಣಕ್ಕೆ ಸಮ್ಮತಿ ನೀಡಿದ ಬಳಿಕ, ಕೋಟ್ಯಂತರ ಜನರ ಕನಸು ನನಸಾಗುತ್ತಿದೆ. ಅಯೋಧ್ಯೆಯ ಚಿತ್ರಣವೂ ಬದಲಾಗುತ್ತಿದ್ದು, ಭಕ್ತಿಸಂಸ್ಕೃತಿ ಮತ್ತೆ ಪ್ರತಿಷ್ಠಾಪಿತವಾಗುತ್ತಿದೆ. ಮಂದಿರ ನಿರ್ವಣದ ಕಾರ್ಯ ಭರದಿಂದ ಸಾಗುತ್ತಿದೆ.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕಣ್ತುಂಬಿಕೊಳ್ಳಬೇಕು ಎಂಬ ಕೋಟ್ಯಂತರ ಜನರ ಕನಸು ನನಸಾಗುವ ದಿನಗಳು ತುಂಬ ದೂರವಿಲ್ಲ. ಸುಪ್ರೀಂ ಕೋರ್ಟ್​ನಲ್ಲಿ ವಿವಾದಿತ ಜಮೀನಿನ ಪ್ರಕರಣ ಇತ್ಯರ್ಥಗೊಂಡ ಬಳಿಕ 2020 ಆಗಸ್ಟ್ 05ರಂದು ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರ ನಿರ್ವಣಕ್ಕಾಗಿ ಶಿಲಾನ್ಯಾಸ ನೇರವೇರಿಸಿ, ಬಳಿಕ ರಾಮಲಲ್ಲಾನ ದರ್ಶನ ಪಡೆದಿದ್ದರು. ಈ ಒಂದು ವರ್ಷದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಿುಸಲು ಉದ್ದೇಶಿಸಿರುವ ಮಂದಿರಕ್ಕಾಗಿ ದೇಶಾದ್ಯಂತ ನಡೆದ ನಿಧಿ ಸಂಗ್ರಹ ಅಭಿಯಾನದಡಿ 3 ಸಾವಿರ ಕೋಟಿ ರೂ. ಸಂಗ್ರಹವಾಗಿದೆ. ಮಂದಿರ ಆವರಣದ ವ್ಯಾಪ್ತಿ 110 ಎಕರೆಗೆ ವಿಸ್ತರಣೆಯಾಗಿದೆ. ಪಂಚಾಗ ನಿರ್ವಣದ ಕಾಮಗಾರಿ ಶೇಕಡ 60ರಷ್ಟು ಪೂರ್ಣಗೊಂಡಿದೆ. ಕಂಬಗಳ ಕೆತ್ತನೆ ಕೆಲಸವೂ ಮುಂದುವರಿದಿದೆ. ಇದೇ ವೇಗದಲ್ಲಿ ಕಾಮಗಾರಿ ಮುಂದುವರಿದರೆ 2023ರ ಅಂತ್ಯಕ್ಕೆ ಮಂದಿರ ನಿರ್ಮಾಣ ಪೂರ್ಣಗೊಂಡು, ಭಕ್ತರ ಪ್ರವೇಶಕ್ಕೆ ಅನುವಾಗುವ ಸಾಧ್ಯತೆ ಇದೆ. ಈಗಲೇ ಅಯೋಧ್ಯೆಗೆ ಪ್ರತಿನಿತ್ಯ ಸರಾಸರಿ 3 ಸಾವಿರ ಭಕ್ತರು ಭೇಟಿ ನೀಡುತ್ತಿದ್ದಾರೆ. ಭಕ್ತರು ಮಂದಿರ ನಿರ್ಮಾಣ ಕಾಮಗಾರಿ ವೀಕ್ಷಿಸಲು ಅನುವಾಗುವಂತೆ ‘ವೀವ್ ಪಾಯಿಂಟ್’ನ್ನು ಸ್ಥಾಪಿಸಲಾಗಿದೆ. ಮಂದಿರ ನಿರ್ಮಾಣ ಪೂರ್ಣಗೊಂಡ ಬಳಿಕ ಭಕ್ತರ ದೈನಂದಿನ ಸಂಖ್ಯೆ 50 ಸಾವಿರಕ್ಕೆ ಹೆಚ್ಚಲಿದೆ. ರಾಮ ಮಂದಿರ ನಿರ್ವಣಕ್ಕಾಗಿ ದೇಶದ ಮೂಲೆಮೂಲೆಗಳಿಂದ 3 ಲಕ್ಷಕ್ಕೂ ಹೆಚ್ಚಿನ ಇಟ್ಟಿಗೆ ಅಯೋಧ್ಯೆ ತಲುಪಿದ್ದವು. ಇವನ್ನು ಸುರಕ್ಷಿತವಾಗಿ ಇಡಲಾಗಿದ್ದು, ಮಂದಿರ ನಿರ್ಮಾಣ ಕಾಮಗಾರಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ಜನ್ಮಭೂಮಿಯೊಳಗೆ ಮಳೆನೀರನ್ನು ಸಂಗ್ರಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಬದಲಾಗಲಿದೆ ಚಿತ್ರಣ

ರಾಮ ಮಂದಿರ ನಿರ್ವಣದೊಂದಿಗೆ ಅಯೋಧ್ಯೆ ಅಭಿವೃದ್ಧಿಯ ಮತ್ತೊಂದು ಮೈಲಿಗಲ್ಲು ತಲುಪಲಿದೆ. ಮೂಲಸೌಕರ್ಯಗಳನ್ನು ಹೆಚ್ಚಿಸಲಾಗುತ್ತಿದ್ದು, ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಪ್ರಮುಖ ಸ್ಥಾನ ಹೊಂದುವ ಉದ್ದೇಶ ಹೊಂದಲಾಗಿದೆ. ಇಲ್ಲಿ ರೈಲ್ವೆ ನಿಲ್ದಾಣವಿದ್ದು, ಪ್ಲಾಟ್​ಫಾಮರ್್​ಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿ ನಡೆಯುತ್ತಿದೆ. ಸರಯೂ ತೀರದ ಪರಿಸರವನ್ನು ಅಂದಗೊಳಿಸಲಾಗುತ್ತಿದೆ. ಸೀತೆಗಾದ ಅಪಮಾನದ ಬಳಿಕ ಅಯೋಧ್ಯೆ ಕಳೆಗುಂದಿತ್ತು ಎಂದು ಸ್ಥಳೀಯ ಸಂತರು ಹೇಳುತ್ತಾರೆ. ಮಂದಿರ ನಿರ್ವಣದ ಬಳಿಕ ಅದು ಮೊದಲಿನ ಜೀವಕಳೆ ಪಡೆಯಲಿದೆ ಎಂಬ ವಿಶ್ವಾಸ ಅವರದ್ದು.

ಬೆಳ್ಳಿ ತೊಟ್ಟಿಲಲ್ಲಿ ರಾಮಲಲ್ಲಾ

ಅಯೋಧ್ಯೆಯಲ್ಲಿ ಆಗಸ್ಟ್ 11ರಿಂದ 23ರವರೆಗೆ ಶ್ರಾವಣ ಜಾತ್ರೆ (ಸಾವನ್ ಮೇಲಾ) ನಡೆಯುತ್ತದೆ. ಅಯೋಧ್ಯೆಯ ನೂರಕ್ಕೂ ಹೆಚ್ಚು ದೇಗುಲಗಳ ಮೂರ್ತಿಗಳನ್ನು ಉತ್ಸವದ ಸ್ಥಳ ಮಣಿಪರ್ವಕ್ಕೆ ತಂದು ತೊಟ್ಟಿಲಿಗೆ ಹಾಕಲಾಗುತ್ತದೆ. ಎಲ್ಲ ಮೂರ್ತಿಗಳನ್ನು ಮೆರವಣಿಗೆ ಮೂಲಕ ಸಂಭ್ರಮದಿಂದ ಬರಮಾಡಿಕೊಳ್ಳಲಾಗುತ್ತದೆ. ಈ ಮೂರ್ತಿಗಳನ್ನು ತೊಟ್ಟಿಲಿಗೆ ಹಾಕಿದ ಬಳಿಕ ಶ್ರಾವಣ ಜಾತ್ರೆ ಆರಂಭವಾಗಿ 12 ದಿನಗಳ ಕಾಲ ಸಾಗುತ್ತದೆ. ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಲಲ್ಲಾನ (ಬಾಲರಾಮ) ರೂಪದಲ್ಲಿ ನೆಲೆಸಿದ್ದಾನೆ. ಮಂದಿರ ನಿರ್ವಣದ ವಿವಾದ ಅಂತ್ಯಗೊಂಡಿರುವುದರಿಂದ ರಾಮಲಲ್ಲಾ ಮೂರ್ತಿಯನ್ನು ಶ್ರಾವಣ ಜಾತ್ರೆಗೆ ತರುವಂತೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ಗೆ ಆಹ್ವಾನ ನೀಡಲಾಗಿದೆ. ಇದಕ್ಕಾಗಿ ಬೆಳ್ಳಿ ತೊಟ್ಟಿಲು ಸಿದ್ಧವಾಗುತ್ತಿದೆ. 500 ವರ್ಷಗಳ ನಂತರ ಇಂಥ ಸುಯೋಗ ಬಂದಿದ್ದು, ರಾಮಲಲ್ಲಾ ಬೆಳ್ಳಿ ತೊಟ್ಟಿಲಲ್ಲಿ ಪವಡಿಸಲಿದ್ದಾನೆ ಎಂದು ಸ್ಥಳೀಯ ಸಂತರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ರಾಮ ಮಂದಿರದ ಗರ್ಭಗೃಹವನ್ನು ಸ್ವರ್ಣದಿಂದ ನಿರ್ವಿುಸುವಂತೆ ಶಿವಸೇನೆ ಆಗ್ರಹಿಸಿದೆ.

ಸಾಂಸ್ಕೃತಿಕ ಭಾರತದ ರೂಪ

ಶ್ರೀರಾಮ ಮಂದಿರ ನಿರ್ವಣಗೊಂಡ ಬಳಿಕ ಅಯೋಧ್ಯೆ ಸಾಂಸ್ಕೃತಿಕ ಭಾರತದ ಸಂಕೇತವಾಗಿ ಎದ್ದು ನಿಲ್ಲಲಿದೆ. ಸರಯೂ ನದಿತೀರ ಅಭಿವೃದ್ಧಿ ಗೊಳ್ಳಲಿದೆ. ಇಲ್ಲಿಂದ ಶ್ರೀರಾಮನ ಮೌಲ್ಯಗಳು, ತತ್ತ್ವಗಳು, ರಾಮಾಯಣದ ಸಂದೇಶಗಳು ಇಡೀ ಮನುಕುಲಕ್ಕೆ ತಲುಪಲಿವೆ. ಅಯೋಧ್ಯೆಗೆ ಜಗತ್ತಿನ ಎಲ್ಲ ದೇಶಗಳಿಂದ ಪ್ರವಾಸಿಗರು ಆಗಮಿಸುವಂತಾಗುತ್ತದೆ ಎನ್ನುವ ವಿಶ್ವಾಸ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ನದ್ದು.

ಏನೇನು ಇರಲಿದೆ?

ಮಂದಿರದ ಪರಿಸರದಲ್ಲಿ ಧ್ಯಾನ ಕೇಂದ್ರ, ಯಜ್ಞ ಭವನ, ವಸ್ತು ಸಂಗ್ರಹಾಲಯ, ಟ್ರಸ್ಟ್ ಕಾರ್ಯಾಲಯ ಇರಲಿವೆ. ರಾಮಾಯಣ ಪಾರ್ಕ್​ನ ಕಾಮಗಾರಿಯೂ ವೇಗದಿಂದ ಸಾಗಿದೆ. ರಾಮಾಯಣದ 100 ಸನ್ನಿವೇಶಗಳನ್ನು ಮೂರ್ತಿಗಳ ರೂಪದಲ್ಲಿ ತಯಾರಿಸಲಾಗುತ್ತಿದೆ. ಈ ಪೈಕಿ50 ಸನ್ನಿವೇಶ ಈಗಾಗಲೇ ಸಿದ್ಧಗೊಂಡಿವೆ.

ಧರ್ಮ ಜಾಗೃತಿ ಪರ್ವ ಆರಂಭ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಣಕ್ಕೆ 2020 ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದು, ಐತಿಹಾಸಿಕ ಘಟನೆ. ಸ್ವತಂತ್ರ ಭಾರತದಲ್ಲಿ ಉನ್ನತ ನಾಯಕರೊಬ್ಬರು ದೇವಸ್ಥಾನಕ್ಕೆ ಶಿಲಾನ್ಯಾಸ ಮಾಡಿದ್ದು ಇದೇ ಮೊದಲು. ಇದರಿಂದ ಧಾರ್ವಿುಕ ಜಾಗೃತಿಗೆ ಉತ್ತೇಜನ ಲಭಿಸಿದೆ. ದೇಶದ ಜನರ ಐದು ಶತಮಾನದ ನಿರೀಕ್ಷೆ ಸಾಕಾರಗೊಂಡ ಕ್ಷಣ. ಈ ವರ್ಷ ನಡೆದ ನಿಧಿ ಸಂಗ್ರಹ ಅಭಿಯಾನದಲ್ಲಿ ದೇಶದ ಕೋಟ್ಯಂತರ ರಾಮಭಕ್ತರು ದೇಣಿಗೆ ಸಲ್ಲಿಸಿದ್ದಾರೆ. ಸುಮಾರು 3 ಸಾವಿರ ಕೋಟಿ ರೂ. ಸಂಗ್ರಹವಾಗಿರುವುದು ದೇಶದ ಎಲ್ಲ ವರ್ಗದಜನರಿಗೆ ರಾಮನ ಬಗ್ಗೆ ಇರುವ ಭಕ್ತಿಯ ದ್ಯೋತಕವಾಗಿದೆ. ಪ್ರಸ್ತುತ ಅಯೋಧ್ಯೆಯಲ್ಲಿ ಪಂಚಾಂಗ ನಿರ್ವಣಕ್ಕೆ ನೆಲಸಮತಟ್ಟುಗೊಳಿಸುವ ಕಾರ್ಯ ಹಾಗೂ ಮಂದಿರದ ಕೆತ್ತನೆ ಕೆಲಸ ನಡೆಯುತ್ತಿದ್ದು, 2024ರ ವೇಳೆಗೆ ದೇವರ ಪ್ರತಿಷ್ಠಾಪನೆ ನಡೆಯಬೇಕು ಎಂಬುದು ಟ್ರಸ್ಟ್ ಗುರಿಯಾಗಿದೆ. ಮಂದಿರಕ್ಕೆ ಬೇಕಾದ ಗ್ರಾನೈಟ್ ಕಲ್ಲುಗಳು ಕರ್ನಾಟಕದಿಂದ ಸರಬರಾಜಾ ಗುತ್ತಿರುವುದು ರಾಜ್ಯದ ಭಕ್ತರಿಗೆ ಖುಷಿಯ ಸಂಗತಿ. ಒಟ್ಟಿನಲ್ಲಿ ಈ ಒಂದು ವರ್ಷದ ಅವಧಿಯಲ್ಲಿ ಧಾರ್ವಿುಕ ಜಾಗೃತಿಯ ಪರ್ವ ಪ್ರಾರಂಭವಾಗಿದೆ.

| ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಮಠ, ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರು

ಟ್ರಸ್ಟ್ ಹೇಳಿದ್ದು

  • ಎಲ್ಲ ವ್ಯವಹಾರಗಳನ್ನು ಬ್ಯಾಂಕ್ ಮುಖೇನ ಮಾಡಲಾಗುತ್ತಿದ್ದು, ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ.
  • 110 ಎಕರೆ ಪ್ರದೇಶದಲ್ಲಿ ನಿರ್ಮಾಣ ಕಾರ್ಯಗಳು ನಡೆಯಲಿದ್ದು, ಇಡೀ ಮಂದಿರ ಪರಿಸರ ದಿವ್ಯವಾಗಿ, ಭವ್ಯವಾಗಿ ತಲೆಯೆತ್ತಲಿದೆ.
  • 2023ರ ಅಂತ್ಯದೊಳಗೆ ಮಂದಿರ ನಿರ್ವಣವಾಗುವ ಸಾಧ್ಯತೆ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net