

ಲಖನೌ: ಉತ್ತರ ಪ್ರದೇಶ ಸರ್ಕಾರವು ದೀಪಾವಳಿ ಆಚರಣೆಯ ಅಂಗವಾಗಿ ಅಯೋಧ್ಯೆಯ 51 ಘಾಟ್ಗಳಲ್ಲಿ ಏಕಕಾಲದಲ್ಲಿ ಅಂದಾಜು 22.23 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಶನಿವಾರ ಹೊಸ ಗಿನ್ನೆಸ್ ದಾಖಲೆ ನಿರ್ವಿುಸಿದೆ.
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತಂಡವು ಡ್ರೋನ್ ಕ್ಯಾಮೆರಾ ಸಹಾಯದಿಂದ ದೀಪಗಳನ್ನು ಎಣಿಸಿತು. ಅವಧ್ ವಿಶ್ವ ವಿದ್ಯಾಲಯ ಮತ್ತು ಅಯೋಧ್ಯೆ ಜಿಲ್ಲಾಡಳಿತದಿಂದ 25,000ಕ್ಕೂ ಹೆಚ್ಚು ಸ್ವಯಂಸೇವಕರು ಒಂದೇ ಸಮಯದಲ್ಲಿ ದೀಪಗಳನ್ನು ಬೆಳಗಿಸಿದರು. ರಾಜ್ಯಪಾಲ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿ, ಕ್ಯಾಬಿನೆಟ್ ಸಚಿವರು ಮತ್ತು 52 ದೇಶಗಳ ರಾಯಭಾರಿಗಳು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ಬಂದಿದೆ.
ಆಕರ್ಷಕ ಮೆರವಣಿಗೆ
ಶನಿವಾರದ ಏಳನೇ ದೀಪೋತ್ಸವದ ಮೊದಲು ಆಕರ್ಷಕ ಮೆರವಣಿಗೆ ನಡೆಯಿತು. ಜಾನಪದ ಕಲಾತಂಡಗಳು ಮತ್ತು ಆರತಿಗಳಿಂದ ಕೂಡಿದ ಮೆರವ ಣಿಗೆಯು ಉದಯ ಚೌಕದಿಂದ ಹೊರಟು ನಗರದ ವಿವಿಧ ಭಾಗಗಳ ಮೂಲಕ ರಾಮ ಕಥಾ ಉದ್ಯಾನವನವನ್ನು ತಲುಪಿತು. ಉತ್ತರ ಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜೈವೀರ್ ಸಿಂಗ್ ಅವರು ಧ್ವಜಾರೋಹಣ ಮಾಡುವ ಮೂಲಕ ಇದಕ್ಕೆ ಚಾಲನೆ ನೀಡಿದರು. ನಂತರ ನಡೆದ ರಾಮನ ಪಟ್ಟಾಭಿಷೇಕ ಮಹೋತ್ಸವದಲ್ಲಿ 50 ಪ್ರಮುಖ ದೇಶಗಳ ರಾಜತಾಂತ್ರಿಕರು ಉಪಸ್ಥಿತರಿದ್ದರು.
2017ರಲ್ಲಿ ಆರಂಭ
ಅಯೋಧ್ಯೆಯಲ್ಲಿ ದೀಪೋತ್ಸವ ಸಂಪ್ರದಾಯವು 2017 ರಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ರಚನೆಯೊಂದಿಗೆ ಪ್ರಾರಂಭವಾಯಿತು. 2017ರಲ್ಲಿ 51,000 ದೀಪಗಳೊಂದಿಗೆ ಪ್ರಾರಂಭವಾಗಿ ಈ ಸಂಖ್ಯೆ 2019 ರಲ್ಲಿ 4.10 ಲಕ್ಷಕ್ಕೆ ಏರಿತು. 2020ರಲ್ಲಿ 6 ಲಕ್ಷಕ್ಕೂ ಹೆಚ್ಚು ಮತ್ತು 2021ರಲ್ಲಿ 9ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸೃಷ್ಟಿಸಲಾಯಿತು. 2022 ರಲ್ಲಿ, ರಾಮ್ ಕಿ ಪೈರಿಯ ಘಾಟ್ಗಳಾದ್ಯಂತ 17 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಲಾಯಿತು. ಆದರೆ, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಕೇವಲ ಐದು ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಬೆಳಗಿದ ಆ ದೀಪಗಳನ್ನು ಪರಿಗಣನೆಗೆ ತೆಗೆದುಕೊಂಡಿತು. ಇದರಿಂದಾಗಿ ದಾಖಲೆಯು ದೀಪಗಳ 15.76 ಲಕ್ಷಕ್ಕೆ ಸೀಮಿತವಾಯಿತು. ಕಳೆದ ಅಕ್ಟೋಬರ್ನಲ್ಲಿ ನಡೆದ ಈ ಕೊನೆಯ ದೀಪೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿದ್ದರು.