'ಯತ್ನಾಳ್​ ಮಾನಸಿಕ ಸ್ಥಿತಿ ಸರಿ ಇಲ್ಲ, ಚಿಕಿತ್ಸೆ ಕೊಡಿಸುವುದು ಗೆಳೆಯನಾಗಿ ನನ್ನ ಕರ್ತವ್ಯ'

yatnal,BSY
Published on

ಶಿವಮೊಗ್ಗ: ಆತ್ಮರತಿಯಲ್ಲಿ ತೊಡಗಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಮಾನಸಿಕ ಸ್ಥಿತಿ ಸರಿ ಇಲ್ಲ. ಶಿವಮೊಗ್ಗದಲ್ಲಿ ಒಳ್ಳೆಯ ಮಾನಸಿಕ ತಜ್ಞರಿದ್ದಾರೆ. ಯತ್ನಾಳ್​ ಶಿವಮೊಗ್ಗಕ್ಕೆ ಬರಲಿ. ಅವರಿಗೆ ಒಳ್ಳೆಯ ಚಿಕಿತ್ಸೆ ಕೊಡಿಸುವುದು ಗೆಳೆಯನಾಗಿ ನನ್ನ ಕರ್ತವ್ಯ ಎಂದು ವಿಧಾನ ಪರಿಷತ್​ ಸದಸ್ಯ ಆಯನೂರು ಮಂಜುನಾಥ್​ ಕುಟುಕಿದ್ದಾರೆ.

ಯತ್ನಾಳ್​ ಪದೇಪದೆ ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಬಿಎಸ್​ವೈ ಸಮರ್ಥ ನಾಯಕರು. ಅವರ ಬದಲಾವಣೆ ಸಾಧ್ಯವಿಲ್ಲ. ಯತ್ನಾಳ್​ ಮಾತಿಗೆ ಯಾವ ಬೆಲೆಯೂ ಇಲ್ಲ. ಪಕ್ಷ ಸದ್ಯದಲ್ಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಅಭದ್ರತೆ ಕಾಡಿದಾಗಲೆಲ್ಲ ಯತ್ನಾಳ್​ ಅಸಂಬದ್ಧವಾಗಿ ಮಾತನಾಡುತ್ತಾರೆ. ಕೆಲವರಿಗೆ ತಮ್ಮನ್ನು ತಾವೇ ವೈಭವೀಕರಿಸಿಕೊಳ್ಳುವ ಚಟವಿರುತ್ತದೆ. ಇದನ್ನೇ ಆತ್ಮರತಿ ಎಂದು ಕರೆಯಲಾಗುತ್ತದೆ. ಈ ಮಾನಸಿಕ ಕಾಯಿಲೆಗೆ ವೈದ್ಯರ ಅವಶ್ಯಕತೆ ಖಂಡಿತಾ ಇದೆ ಎಂದು ಆಯನೂರು ಮಂಜುನಾಥ್​ ಲೇವಡಿ ಮಾಡಿದರು.

ಬೇರೆ ಪಕ್ಷಗಳಿಗೆ ರಾಜೀನಾಮೆ ನೀಡಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದವರು ಇದ್ದಾರೆ. ಮೊದಲು ಅವರಿಗೆ ಅವಕಾಶ ನೀಡಲಿ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ ಆಯನೂರು ಮಂಜುನಾಥ್​, ಒಂದು ವೇಳೆ ಸಚಿವ ಸ್ಥಾನ ನೀಡಿದರೆ ನಿಭಾಯಿಸಲು ಸಮರ್ಥನಿದ್ದೇನೆ. ಕೊಡುವುದಾದರೆ ಉನ್ನತ ಶಿಕ್ಷಣ ಖಾತೆಯನ್ನೇ ಕೊಡಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net