

ಚಿತ್ರದುರ್ಗ: ದೆವ್ವ ಬಿಡಿಸುವ ನೆಪದಲ್ಲಿ ಮಂತ್ರವಾದಿಯ ಪುತ್ರನೊಬ್ಬ ಯುವತಿಯ ಬೆತ್ತಲೆ ದೃಶ್ಯವನ್ನು ವಿಡಿಯೋ ಮಾಡಿದ್ದಾನೆ. ಅದೇ ದೃಶ್ಯವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಬಲವಂತವಾಗಿ ಮದುವೆಯನ್ನೂ ಮಾಡಿಕೊಂಡಿದ್ದಾನೆ!
ಹೌದು, ಇಂತಹದ್ದೊಂದು ಪ್ರಕರಣ ಚಳ್ಳಕೆರೆ ತಾಲೂಕಿನ ಭರಮಸಾಗರ ಗ್ರಾಮದಲ್ಲಿ ಸಂಭವಿಸಿದ್ದು, ಆರೋಪಿ ವಿರುದ್ಧ ಎಸ್ಪಿಗೆ ಸಂತ್ರಸ್ತ ಯುವತಿ ದೂರು ನೀಡಿದ್ದಾರೆ.
ಮಂತ್ರವಾದಿ ಶರಣಪ್ಪ ಮತ್ತು ಈತನ ಪುತ್ರ ಭಾಸ್ಕರ್ ಆರೋಪಿಗಳು. ಇವರಿಬ್ಬರೂ 19 ವರ್ಷದ ಯುವತಿಯೊಬ್ಬಳಿಗೆ ದೆವ್ವ ಬಿಡಿಸುವ ನೆಪದಲ್ಲಿ ಗ್ರಾಮ ಹೊರವಲಯದ ಜಾಲಿಗಿಡಗಳ ಪ್ರದೇಶಕ್ಕೆ ಕರೆದೊಯ್ದು ಆಕೆಗೆ ಮತ್ತು ಬರುವ ಪಾನೀಯ ಕುಡಿಸಿದ್ದಾರೆ. ಯುವತಿ ಪ್ರಜ್ಞೆ ತಪ್ಪಿದ ಬಳಿಕ ಆಕೆಯನ್ನು ಬೆತ್ತಲೆಗೊಳಿಸಿ ವಿಡಿಯೋ ಮಾಡಿದ್ದಾರೆ.
ಈ ದೃಶ್ಯ ತೋರಿಸಿ ತಾನು ಹೇಳಿದಂತೆ ಕೇಳದಿದ್ದರೆ ವಾಟ್ಸ್ಆ್ಯಪ್ ಮತ್ತು ಫೇಸ್ಬುಕ್ಗೆ ಹಾಕುವುದಾಗಿ ಬೆದರಿಕೆ ಹಾಕಿದ್ದ ಭಾಸ್ಕರ್, ಯುವತಿಯನ್ನ ಪಾವಗಡಕ್ಕೆ ಕರೆದೊಯ್ದು ವಿವಾಹ ಆಗಿದ್ದಾನೆ ಎಂದು ಸಂತ್ರಸ್ತೆ ಮತ್ತು ಆಕೆಯ ಕುಟುಂಬಸ್ಥರು ಚಿತ್ರದುರ್ಗ ಎಸ್ಪಿ ಜಿ.ರಾಧಿಕಾ ಅವರಿಗೆ ದೂರು ನೀಡಿದ್ದಾರೆ.
ಯುವತಿ ಪ್ರಜ್ಞೆ ತಪ್ಪಿದ ಬಳಿಕ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ. ಆರೋಪಿ ಭಾಸ್ಕರ್ ಐದು ತಿಂಗಳ ಹಿಂದೆ 14 ವರ್ಷದ ಬಾಲಕಿಯನ್ನ ವಿವಾಹ ಆಗಿದ್ದ ಎಂದು ಗೊತ್ತಾಗಿದೆ.
ಈ ಬಗ್ಗೆ ದೂರಿನಲ್ಲಿ ವಿವರಿಸಿರುವ ಸಂತ್ರಸ್ತ ಯುವತಿ, ಮಂತ್ರವಾದಿ ತಂದೆ-ಮಗನಿಂದ ಹೆಣ್ಣುಮಕ್ಕಳ ಜೀವನ ಹಾಳಾಗುತ್ತಿದೆ. ದಯವಿಟ್ಟು ನಮ್ಮನ್ನು ಅವರಿಂದ ಕಾಪಾಡಿ ಎಂದು ಕೋರಿದ್ದಾರೆ.