ಕರ್ನಾಟಕಕ್ಕೆ ಎವೈ 4.2 ಕಾಟ: ಆತಂಕ ಸೃಷ್ಟಿಸಿದ ರೂಪಾಂತರಿ; 7 ಮಂದಿಯಲ್ಲಿ ಸೋಂಕು

corona
Published on

ಬೆಂಗಳೂರು: ವಿಶ್ವದ ಹಲವು ದೇಶಗಳಲ್ಲಿ ಆತಂಕ ಸೃಷ್ಟಿಸಿರುವ ಕರೊನಾ ಹೊಸ ರೂಪಾಂತರಿ ಎವೈ 4.2 ರಾಜ್ಯದಲ್ಲಿ ಏಳು ಮಂದಿಯಲ್ಲಿ ಪತ್ತೆಯಾಗಿದೆ. ಕೋವಿಡ್ ಸೋಂಕಿಗೆ ಒಳಗಾದವರ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸಿಸ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ ಬೆಂಗಳೂರಿನಲ್ಲಿ ಮೂವರು ಸೇರಿ ರಾಜ್ಯದಲ್ಲಿ ಒಟ್ಟು ಏಳು ಮಂದಿಯಲ್ಲಿ ರೂಪಾಂತರಿ ಪ್ರಭೇದ ದೃಢಪಟ್ಟಿದೆ. ಎಲ್ಲರೂ ಗುಣಮುಖರಾಗಿದ್ದಾರೆ. ಅವರಿಂದ ಯಾರಿಗೂ ಸೋಂಕು ಹರಡಿರುವುದು ಪತ್ತೆಯಾಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.

ಹೊಸ ತಳಿಯ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಯಾವುದೇ ಕಂಟೇನ್ಮೆಂಟ್ ವಲಯಗಳಲ್ಲಿ ಈವರೆಗೂ ಹೊಸ ರೂಪಾಂತರಿ ಪ್ರಭೇದ ಪತ್ತೆಯಾಗಿಲ್ಲ. ಒಂದು ವೇಳೆ ಎವೈ 4.2 ಪ್ರಕರಣಗಳು ಹೆಚ್ಚಾದರೆ ತಾಂತ್ರಿಕ ಸಲಹಾ ಸಮಿತಿ ಜತೆ ರ್ಚಚಿಸಿ ಕಂಟೇನ್ಮೆಂಟ್, ಪರೀಕ್ಷೆ ಹೆಚ್ಚಳ, ಐಸೊಲೇಷನ್ ಸೇರಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೋವಿಡ್ ಸೋಂಕಿಗೆ ಒಳಗಾದ ಪ್ರತಿ ನೂರು ಮಂದಿಯಲ್ಲಿ ಶೇ. 10 ಮಂದಿಯ ಮಾದರಿಯನ್ನು ಜಿನೋಮಿಕ್ ಸೀಕ್ಷೆನ್ಸ್ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ತಜ್ಞರ ಸಲಹೆ ಆಧರಿಸಿ ಈ ಪ್ರಮಾಣವನ್ನು ಹೆಚ್ಚಳ ಮಾಡಲಾಗುವುದು ಎಂದು ಅವರು ತಿಳಿಸಿದರು.

ಮಧ್ಯಪ್ರದೇಶದ ಇಂದೋರ್​ನಲ್ಲಿ ಎವೈ 4.2 ರೂಪಾಂತರಿಯ ಏಳು ಪ್ರಕರಣಗಳು ಪತ್ತೆಯಾಗಿದ್ದವು. ಇದೀಗ ಕರ್ನಾಟಕದಲ್ಲಿ ಏಳು, ಕೇರಳದಲ್ಲಿ ನಾಲ್ಕು, ತೆಲಂಗಾಣದಲ್ಲಿ ಎರಡು ಹಾಗೂ ಜಮ್ಮು-ಕಾಶ್ಮೀರ, ಮಹಾರಾಷ್ಟ್ರದಲ್ಲಿ ತಲಾ ಒಂದರಂತೆ ಭಾರತದಲ್ಲೂ ಕಳೆದೊಂದು ವಾರದಿಂದ ಪ್ರಕರಣಗಳ ಸಂಖ್ಯೆ ಏರುತ್ತಿದೆ.

ರೂಪಾಂತರಿ ಪ್ರಭೇದಗಳು: ರಾಜ್ಯದಲ್ಲಿ ಈವರೆಗೆ 2,285 ವಿವಿಧ ರೂಪಾಂತರಿ ಪ್ರಭೇದಗಳ ಪ್ರರಕಣಗಳು ಪತ್ತೆಯಾಗಿವೆ. ಆಲ್ಪಾ (ಬಿ.1.1.7) 155, ಬೀಟಾ (ಬಿ.1.351) 8, ಡೆಲ್ಟಾ (ಬಿ.1.617.2) 1,679, ಡೆಲ್ಟಾ ಪ್ಲಸ್ (ಬಿ.1.617.2.1(ಎವೈ.1) 4, ಡೆಲ್ಟಾ ಸಬ್ ಲೀನಿಯೇಜ್ (ಎವೈ.4) 256, ಡೆಲ್ಟಾ ಸಬ್ ಲೀನಿಯೇಸ್ (ಎವೈ.12) 15, ಕಾಪಾ (ಬಿ.1.617.1) 160, ಈಟಾ (ಬಿ.1.525) 01 ಹಾಗೂ (ಎವೈ.4.2) 7 ಪ್ರಕರಣಗಳು ವರದಿಯಾಗಿವೆ.

ಹೊಸ ನಿರ್ಬಂಧ ಹೇರಿದರೆ ಕಷ್ಟಕರ: ಕರೊನಾ ನಿಯಂತ್ರಣಕ್ಕಾಗಿ ವಿದೇಶದಿಂದ ಬರುವವರ ಮೇಲೆ ಈಗಾಗಲೇ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿದ್ದು, ಇನ್ನಷ್ಟು ನಿರ್ಬಂಧ ಹಾಕಿದರೆ ಕಷ್ಟವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ. ದುಬೈ ಪ್ರವಾಸದ ವೇಳೆ ನಾನೇ ಸ್ವತಃ ನಿರ್ಬಂಧದ ಕಷ್ಟ ಅನುಭವಿಸಿದ್ದೇನೆ. ಹೋಗುವಾಗಲೂ ಆರ್​ಟಿಪಿಸಿಆರ್ ಟೆಸ್ಟ್, ಬರುವಾಗಲೂ ಆರ್​ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಂಡಿರುವೆ. ಸೋಂಕು ವ್ಯಾಪಕವಾಗಿ ಹರಡಿರುವ ಪ್ರದೇಶದಲ್ಲಿ ಒಂದು ಕಡೆ ಟೆಸ್ಟ್ ಮಾಡಿ ಬಿಡುವಂತಾಗಬೇಕು. ವೈರಾಣು ರೂಪಾಂತರ ಆಗುತ್ತಲೇ ಇರುತ್ತದೆ. ಒಬ್ಬರಿಂದ ಒಬ್ಬರಿಗೆ ಹರಡಿದಾಗ ರೂಪಾಂತರ ಹೆಚ್ಚಾಗಲಿದ್ದು, ಸಾರ್ವಜನಿಕರು ಲಸಿಕೆ ಪಡೆದುಕೊಂಡ ಮಾತ್ರ ಇದನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಅವರು ಹೇಳಿದರು.

ಇಂದು ಹೊಸ ಮಾರ್ಗಸೂಚಿ?: ಬ್ರಿಟನ್, ರಷ್ಯಾದಲ್ಲಿ ಕರೊನಾ ರೂಪಾಂತರಿ ‘ಎವೈ-4.2’ ತೀವ್ರಗೊಂಡಿರುವ ಬೆನ್ನಲ್ಲೇ ಹಲವು ರಾಷ್ಟ್ರಗಳಲ್ಲಿ ಕರೊನಾ ಮೂರನೇ ಅಲೆ ಪ್ರವೇಶಿಸಿದ್ದು, ಈ ಬೆಳವಣಿಗೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೊಸ ರೂಪಾಂತರಿ ವೈರಾಣು ಸ್ವರೂಪ, ಅಪಾಯದಮಟ್ಟ, ಸೋಂಕಿನ ತೀವ್ರತೆ ಬಗ್ಗೆ ಕೇಂದ್ರ ಸರ್ಕಾರ ಅಧ್ಯಯನ ನಡೆಸಿದೆ.

ಇದಕ್ಕೆ ಪೂರಕವಾಗಿ ಹೊಸ ಮಾರ್ಗಸೂಚಿ ಹೊರಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಮಂಗಳವಾರ ಸಭೆ ನಡೆಸಿದ್ದಾರೆ. ರಷ್ಯಾದಲ್ಲಿ ಕರೊನಾ ಲಸಿಕೆ ಹಾಕಿಸಿಕೊಳ್ಳದವರಿಗೆ ‘ಎವೈ-4.2’ ವೈರಾಣು ಬಾಧಿಸಿದೆ. ಎರಡೂ ಡೋಸ್ ಹಾಕಿಸಿಕೊಂಡವರಿಗೆ ರೂಪಾಂತರಿ ವೈರಾಣುವಿನ ಭಯವಿಲ್ಲ. ರಾಜ್ಯದಲ್ಲಿ ಹೊಸ ಪ್ರಕರಣಗಳು ಕಡಿಮೆಯಾದ ಮಾತ್ರಕ್ಕೆ ಜನರು ಲಸಿಕೆ ಹಾಕಿಸಿಕೊಳ್ಳಲು ನಿರ್ಲಕ್ಷ್ಯ ಮಾಡಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಮುನ್ನೆಚ್ಚರಿಕೆ ನಿಯಮಗಳ ಪಾಲನೆ ಜತೆಗೆ ಹೊಸ ಮಾರ್ಗಸೂಚಿಯಲ್ಲಿ ಏನೆಲ್ಲ ಇರಬೇಕು ಎಂಬ ಬಗ್ಗೆಯೂ ಚರ್ಚೆಯಾಗಿದೆ.

ಕರೊನಾ ಮೂರನೇ ಅಲೆ ನಿರ್ವಹಣೆ ಹಾಗೂ ನಿಯಂತ್ರಣ ಕುರಿತು ತಜ್ಞರ ಸಲಹೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಡಾ.ಕೆ.ಸುಧಾಕರ್ ವಿವರಿಸಲಿದ್ದಾರೆ. ಸಚಿವರು ಮತ್ತು ಮುಖ್ಯ ಕಾರ್ಯದರ್ಶಿ, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆಗೆ ಸಿಎಂ ಚರ್ಚೆ ನಡೆಸಲಿದ್ದಾರೆ. ಹೊಸ ಮಾರ್ಗಸೂಚಿ ಹೊರಡಿಸುವ ವಿಚಾರದಲ್ಲಿ ಬುಧವಾರ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.

ಹೊಸದಾಗಿ ಕಂಡುಬಂದಿರುವ ಕರೊನಾ ವೈರಸ್​ನ ಡೆಲ್ಟಾ ಎವೈ4.2 ಬಗ್ಗೆ ಸರ್ಕಾರ ತೀವ್ರ ನಿಗಾ ವಹಿಸಿ ಪರಿಶೀಲಿಸುತ್ತಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಎನ್​ಸಿಡಿಸಿ) ವೈರಸ್​ನ ವಿವಿಧ ರೂಪಾಂತರಿಗಳನ್ನು ಅಧ್ಯಯನ ಮಾಡಿ ವಿಶ್ಲೇಷಿಸಲಿವೆ. ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಯೋಜನೆಯಡಿ ಕಂಟೇನರ್ ಆಧರಿತ ಎರಡು ಮೊಬೈಲ್ ಆಸ್ಪತ್ರೆಗಳನ್ನು ದೆಹಲಿ ಮತ್ತು ಚೆನ್ನೈನಲ್ಲಿ ಸ್ಥಾಪಿಸಲಾಗುವುದು.

| ಮನಸುಖ್ ಮಾಂಡವೀಯ ಕೇಂದ್ರ ಆರೋಗ್ಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net