

Axiom 4: ಭಾರತೀಯ ಗಗನಯಾತ್ರಿ ಮತ್ತು ಗ್ರೂಪ್ ಕ್ಯಾಪ್ಟನ್ ಸುಭಾನ್ಶು ಶುಕ್ಲಾ ಸೇರಿದಂತೆ ನಾಲ್ವರು ಸದಸ್ಯರ ಸಿಬ್ಬಂದಿಯನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ಮಿಷನ್‌ಗೆ ಕರೆದೊಯ್ಯುವ ಆಕ್ಸಿಯಮ್ -4 ಇದೀಗ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ವಾಣಿಜ್ಯ ಬಾಹ್ಯಾಕಾಶ ಮಿಷನ್ ಅನ್ನು ಸದ್ಯ ಮತ್ತೊಮ್ಮೆ ಮುಂದೂಡಲಾಗಿದ್ದು, ಪ್ರತಿಕೂಲ ಹವಾಮಾನದಿಂದಾಗಿ ಜೂನ್ 11ಕ್ಕೆ ಬಾಹ್ಯಾಕಾಶ ಮಿಷನ್ ಅನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಸ್ಪೇಸ್‌ಎಕ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮಂಗಳವಾರ (ಜೂನ್ 10) ಸಂಜೆ 5:52ಕ್ಕೆ ನಡೆಯಬೇಕಿದ್ದ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಉಡಾವಣೆಯನ್ನು ಒಂದು ದಿನದ ಮಟ್ಟಿಗೆ ತಡೆ ಹಿಡಿಯಲಾಗಿದೆ. ಬುಧವಾರ ಭಾರತೀಯ ಕಾಲಮಾನ ಸಂಜೆ 5:30ಕ್ಕೆ ನಡೆಯಲಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
"ಜೂನ್ 11ರ ಬುಧವಾರದಂದು ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39A (LC-39A) ನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಆಕ್ಸಿಯಮ್ ಸ್ಪೇಸ್‌ನ ಆಕ್ಸಿಯಮ್ ಮಿಷನ್ 4 (Ax-4)ನ ಫಾಲ್ಕನ್ 9 ಉಡಾವಣೆಯನ್ನು ಸ್ಪೇಸ್‌ಎಕ್ಸ್ ನಿಗಡಿಪಡಿಸಿದೆ" ಎಂದು ಉಡಾವಣೆಗೆ ಶಕ್ತಿ ನೀಡುವ ಬಾಹ್ಯಾಕಾಶ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಜೂನ್ 12ರ ಗುರುವಾರ ಬೆಳಗ್ಗೆ 7:37ಕ್ಕೆ ಬ್ಯಾಕಪ್ ಆಯ್ಕೆ ಲಭ್ಯವಿರುತ್ತದೆ ಎಂದು ಹೇಳಿದೆ.
ಅಸಲಿಗೆ ಮೇ.29ರಂದು ಕಾರ್ಯಾಚರಣೆಗಾಗಿ ಬಾಹ್ಯಾಕಾಶಕ್ಕೆ ಹೋಗಬೇಕಿದ್ದ ಆಕ್ಸಿಯಮ್-4 ಮಿಷನ್ ಅನ್ನು ಈ ತಿಂಗಳ 8ಕ್ಕೆ ನಿಗದಿಪಡಿಸಲಾಗಿತ್ತು. ಇದಾದ ಬಳಿಕ ಮತ್ತೆ 10ಕ್ಕೆ ಮುಂದೂಡಲಾಗಿತ್ತು. ಆದ್ರೆ, ಇದೀಗ ಮೂರನೇ ಬಾರಿಗೆ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದ್ದು, ಜೂನ್.11ಕ್ಕೆ ಮುಂದೂಡಿರುವುದು ಹಲವರ ಬೇಸರಕ್ಕೆ ಕಾರಣವಾಗಿದೆ. ಅಮೆರಿಕದ ಖಾಸಗಿ ಬಾಹ್ಯಾಕಾಶ ಕಂಪನಿ 'ಆಕ್ಸಿಯಮ್ ಸ್ಪೇಸ್' ನಡೆಸುತ್ತಿರುವ ಮಾನವಸಹಿತ ಬಾಹ್ಯಾಕಾಶ ಪ್ರಯೋಗ 'AX-4' ಕಾರ್ಯಾಚರಣೆಯ ಭಾಗವಾಗಿ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಹೆಜ್ಜೆಯಿಡಲಿದ್ದಾರೆ.
ಈ ಸ್ಪೇಸ್ ಮಿಷನ್ ಮೂಲಕ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಪ್ರವೇಶಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ. 1984ರಲ್ಲಿ ರಷ್ಯಾದ ಸೋಯುಜ್ ರಾಕೆಟ್ ಬಳಸಿ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ ರಾಕೇಶ್ ಶರ್ಮಾ ಎಂಬುದು ಗಮನಾರ್ಹ,(ಏಜೆನ್ಸೀಸ್)