

ಬೆಂಗಳೂರು: ವಿದ್ಯುತ್ ಉಪಕೇಂದ್ರಗಳ ಬಳಿಕ ಸೌರಶಕ್ತಿ ಆಧಾರಿತ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ, ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಸುವ ಫೀಡರ್ಗಳ ಸೌರೀಕರಣ ಉದ್ದೇಶಿತ ಪಿಎಂ ಕುಸುಮ್-ಸಿ ಯೋಜನೆಯ ಮೊದಲನೇ ಹಂತ ಲೋಕಾರ್ಪಣೆಯಾಗಲಿದೆ.
ಕೃಷಿ ಪಂಪ್ಸೆಟ್ಗಳಿಗೆ ಹಗಲಿನಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಖಾತರಿಪಡಿಸಲಿದೆ. ಅದೇ ಕಾಲಕ್ಕೆ ರಾಜ್ಯ ಸರ್ಕಾರದ ಮೇಲೂ ಉಚಿತ ವಿದ್ಯುತ್ ಪೂರೈಕೆ ಸಬ್ಸಿಡಿ ಹೊರೆಯನ್ನೂ ತಗ್ಗಿಸಲಿದೆ.
ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಹೋಬಳಿಯಲ್ಲಿ ಯೋಜನೆಯಡಿ ಸ್ಥಾಪಿಸಿದ ಸೋಲಾರ್ ಘಟಕದ ವಿದ್ಯುತ್ ಉತ್ಪಾದನೆಗೆ 11ರಂದು ಚಾಲನೆ ಸಿಗಲಿದೆ. ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶ್ರೀಪಾದಯಶ್ಸೋನಾಯಕ, ಸಂಸದ, ರಾಜ್ಯದ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ.
ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಈ ವಿಷಯ ಪ್ರಕಟಿಸಿ, ಯೋಜನೆಯಡಿ ಮೊದಲ ಹಂತದಲ್ಲಿ 2,400 ಮೆಗಾ ವಾಟ್ ಸೌರ ವಿದ್ಯುತ್ ಉತ್ಪಾದನೆ, ಕೃಷಿ ಫೀಡರ್ಗಳ ಪೂರೈಕೆ ಗುರಿಯನ್ನು ಡಿಸೆಂಬರ್ ಒಳಗೆ ಸಾಧಿಸಲಾಗುವುದು ಎಂದು ತಿಳಿಸಿದರು.
ಒಟ್ಟು 389 ವಿದ್ಯುತ್ ಉಪಕೇಂದ್ರಗಳ ಬಳಿ ವಿವಿಧ ಸಾಮರ್ಥ್ಯದ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. ಸರ್ಕಾರಿ ಜಮೀನು ಲಭ್ಯವಿರುವೆಡೆ ವಾರ್ಷಿಕ 25 ಸಾವಿರ ರೂ. ಗುತ್ತಿಗೆ ದರದಲ್ಲಿ 25 ವರ್ಷಗಳ ಭೋಗ್ಯಕ್ಕೆ ಖಾಸಗಿ ಕಂಪನಿಗಳಿಗೆ ನೀಡಲಾಗುತ್ತಿದೆ. ಗುತ್ತಿಗೆ ದರದ ಮೊತ್ತ ಆಯಾ ಗ್ರಾ.ಪಂ.ಗಳಿಗೆ ಸಂದಾಯವಾಗಲಿದೆ ಎಂದರು.
ಸರ್ಕಾರಿ ಜಮೀನು ಇಲ್ಲದೆಡೆ ಖಾಸಗಿ ಜಮೀನು ಭೋಗ್ಯಕ್ಕೆ ಪಡೆದು, ಘಟಕ ಸ್ಥಾಪಿಸುವುದು ಗುತ್ತಿಗೆ ಪಡೆದ ಕಂಪನಿ ಜವಾಬ್ದಾರಿಯಾಗಿದೆ. ಈ ಘಟಕದಡಿ ಉತ್ಪಾದಿತ ವಿದ್ಯುತ್ಗೆ ಕೆಇಆರ್ಸಿ ಪ್ರತಿ ಯೂನಿಟ್ಗೆ ಗರಿಷ್ಠ 3.17 ರೂ. ನಿಗದಿಪಡಿಸಿದ್ದು, ಇದನ್ನು ಸರ್ಕಾರ ತುಂಬಿಕೊಡಲಿದೆ.
ಸೌರ ಘಟಕ ಸ್ಥಾಪಿಸಲು ಪ್ರತಿ ಮೆ.ವಾ.ಗೆ 3.5 ರಿಂದ ನಾಲ್ಕು ಕೋಟಿ ರೂ. ವೆಚ್ಚವಾಗಲಿದೆ. ಮೊದಲ ಹಂತದಡಿ 2,400 ಮೆ.ವಾ ವಿದ್ಯುತ್ ಉತ್ಪಾದನೆಗೆ ಖಾಸಗಿ ಕಂಪನಿಗಳು 9,500 ಕೋಟಿ ರೂ. ಬಂಡವಾಳ ಹೂಡಲಿವೆ.
ಮೊದಲ ಹಂತದ ಯೋಜನೆಯಡಿ 6.32 ಲಕ್ಷ ಪಂಪ್ಸೆಟ್ಗಳ ಒಳಪಡಲಿವೆ. ಕುಸುಮ್-ಸಿಯಡಿ ಕೇಂದ್ರ ಸರ್ಕಾರ ಪ್ರತಿ ಮೆ.ವಾ.ಗೆ ಒಂದು ಕೋಟಿ ರೂ. ಸಬ್ಸಿಡಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲಿದೆ.
ಮೊದಲ ಹಂತದ 2,400 ಮೆ.ವಾ. ಸೋಲಾರ್ ವಿದ್ಯುತ್ ಉತ್ಪಾದನೆ ಗುರಿ ಪೈಕಿ ಈಗಾಗಲೇ 200 ಮೆ.ವಾ. ವಿದ್ಯುತ್ ಉತ್ಪಾದಿಸುವ ಘಟಕಗಳು ಸ್ಥಾಪನೆಯಾಗಿವೆ. ಕೆಲವೇ ತಿಂಗಳೊಳಗೆ 93 ಸ್ಥಳಗಳಲ್ಲಿ 545 ಮೆ.ವಾ. ಸಾಮರ್ಥ್ಯದ ಸೌರ ಘಟಕಗಳು ಚಾಲನೆಗೊಳ್ಳಲಿದ್ದು, ಡಿಸೆಂಬರ್ ಒಳಗೆ ಗುರಿ ಸಾಧಿಸಲಿದ್ದೇವೆ ಎಂದು ಕೆ.ಜೆ.ಜಾರ್ಜ್ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವಗುಪ್ತ, ಕ್ರಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ್ ಇದ್ದರು.