ವಿಡಿಯೋ ಮಾಡಿ ರಕ್ಷಣೆ ಕೋರಿದ ಮಹಿಳೆ

Twitter Threads
Published on

ಬೆಂಗಳೂರು: ನನ್ನ ಮತ್ತು ಮಕ್ಕಳನ್ನು ಪತಿ ಮನೆಯಿಂದ ಹೊರ ಹಾಕಿದ್ದು, ನನಗೆ ಜೀವ ಬೆದರಿಕೆ ಇದೆ. ಆತ ಯಾವುದೇ ಕ್ಷಣದಲ್ಲೂ ನಮ್ಮನ್ನು ಕೊಲ್ಲಬಹುದು ಎಂದು ಆರೋಪಿಸಿ ಮಹಿಳೆಯೊಬ್ಬರು ಮಕ್ಕಳ ಸಹಿತ ವಿಡಿಯೋ ಮಾಡಿ ರಕ್ಷಣೆ ಕೋರಿದ್ದಾರೆ.
ಈ ಸಂಬಂಧ ಹೈದರಾಬಾದ್ ಮೂಲದ ಪೂಜಾ ಗಾಂಧಿ ಎಂಬುವವರು ಪತಿ ವೈಭವ್ ಜೈನ್ ಮತ್ತು ಗೀತಿಕಾ ಬಿಂದನಂ, ರೋಹನ್ ಸಾಲ್ಯಾನ್ ಎಂಬುವವರಿಂದ ಪ್ರಾಣ ಬೆದರಿಕೆ ಇದೆ ಎಂದು ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮತ್ತೊಂದೆಡೆ ಪೂಜಾ ಗಾಂಧಿ ರಕ್ಷಣೆ ಕೋರಿ ಮಾಡಿರುವ ಸೆಲ್ಫಿ ವಿಡಿಯೋವನ್ನು ಆಕೆಯ ಸಹೋದರ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನಗರ ಪೊಲೀಸ್ ಆಯುಕ್ತರು, ಪಿಎಂ, ಕೇಂದ್ರ ಸಚಿವರಿಗೆ,ಸಿಎಂ ಹಾಗೂ ಇತರರಿಗೆ ಟ್ಯಾಗ್ ಮಾಡಿದ್ದಾರೆ.
ವೈಭವ್ ಜೈನ್ ಜತೆ ಪೂಜಾಗಾಂಧಿ ಆರು ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಕೊತ್ತನೂರಿನಲ್ಲಿ ವಾಸವಾಗಿದ್ದಾರೆ. ಕೌಟುಂಬಿಕ ವಿಚಾರಕ್ಕೆ ದಂಪತಿ ನಡುವೆ ಗಲಾಟೆಯಾಗಿದೆ. ಅಲ್ಲದೆ, ಪತ್ನಿ ಪೂಜಾ ಗಾಂಧಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಮಕ್ಕಳ ಸಮೇತ ಮನೆಯಿಂದ ಹೊರಹಾಕಿದ್ದಾನೆ. ಜತೆಗೆ ಪ್ರಾಣ ಬೆದರಿಕೆಯೂ ಹಾಕಿದ್ದಾನೆ. ಆತ ಮಾತ್ರವಲ್ಲದೆ, ಆತನ ಸಂಬಂಧಿಕರಿಂದಲೂ ಪ್ರಾಣ ಬೆದರಿಕೆ ಇದೆ. ಯಾವುದೇ ಕ್ಷಣದಲ್ಲೂ ನಮ್ಮನ್ನು ಕೊಲ್ಲಬಹುದು ಎಂದು ಪೂಜಾಗಾಂಧಿ ವಿಡಿಯೋದಲ್ಲಿ ಆರೋಪಿಸಿದ್ದಾರೆ. ದೂರು ಕೂಡ ನೀಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು. ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net