

ಬೆಟ್ಟದಪುರ: ಮಾದಕ ವಸ್ತುಗಳ ಜಾಲಕ್ಕೆ ಬಲಿಯಾಗಬಾರದು ಎಂದು ಬೆಟ್ಟದಪುರ ಅನಿಕೇತನ ಪಿಯು ಕಾಲೇಜಿನ ಕಾರ್ಯದರ್ಶಿ ಡಾ.ಜೆ.ಸೋಮಣ್ಣ ಹೇಳಿದರು. ಸಮೀಪದ ಬೆಟ್ಟದತುಂಗದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಟ್ಟದಪುರ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದವತಿಯಿಂದ ಸೋಮವಾರ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾದಕ ವಸ್ತುಗಳ ಚಟಕ್ಕೆ ಶಾಲಾ ಮಕ್ಕಳು, ಯುವಕರು, ವಿದ್ಯಾವಂತರು, ಸಾಧಕರು ಹಾಗೂ ಮಹಿಳೆಯರು ಸಹಿತ ಬಲಿಯಾಗುತ್ತಿರುವ ಪ್ರಕರಣ ಹೆಚ್ಚಾಗಿದೆ. ಡ್ರಗ್ಸ್ ಕಳ್ಳ ಸಾಗಣೆ, ವ್ಯಾಪಾರದ ಕೇಂದ್ರಗಳು ಶಾಲಾ, ಕಾಲೇಜುಗಳತ್ತ ಮುಖಮಾಡಿರುವುದು ದುರಂತ ಎಂದರು. ಮದ್ಯಪಾನ, ಮಾದಕ ವಸ್ತುಗಳು ನಮ್ಮ ಸಾಮಾಜಿಕ ಘನತೆ ಮತ್ತು ಗೌರವಗಳನ್ನು ಹಾಳುಮಾಡುತ್ತವೆ. ಆರ್ಥಿಕವಾಗಿಯೂ ನಮ್ಮನ್ನು ದುರ್ಬಲರನ್ನಾಗಿ ಮಾಡುತ್ತವೆ. ಆರೋಗ್ಯವೂಹಾಳಾಗುತ್ತದೆ. ಹಾಗಾಗಿ ನಮ್ಮತನ ಉಳಿಸಿಕೊಳ್ಳಲು ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.
ಮೊಬೈಲ್ ಫೋನ್ ಬಳಕೆಗೆ ಮಿತಿಇರಲಿ:
ಮುಖ್ಯಶಿಕ್ಷಕ ಗಣೇಶ್ ಮಾತನಾಡಿ ಮದ್ಯಪಾನ, ಧೂಮಪಾನದಂತೆ ಮೊಬೈಲ್ ಫೋನ್ ಬಳಕೆಯೂ ವಿದ್ಯಾರ್ಥಿಗಳ ವಿಕಸನಕ್ಕೆ ಮಾರಕವಾಗುತ್ತಿದೆ. ವಿದ್ಯಾರ್ಜನೆ ಕಡೆ ಗಮನಹರಿಸಿದರೆ ಬದುಕು ಸುಗಮವಾಗುತ್ತದೆ ಎಂದರು. ಯೋಜನೆಯ ಮೇಲ್ವಿಚಾರಕ ಹೇಮಂತ, ಶಿಕ್ಷಕರಾದ ರಾಜೀವ, ಮೋಹನ್ ಕುಮಾರ, ಸೋಮಶೇಖರ, ಪಾರ್ವತಿ, ಕವಿತಾ ಇತರರು ಇದ್ದರು.