ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಕಾನೂನಿನ ಅರಿವು ಅತ್ಯಗತ್ಯ

 ಯುವವಾಹಿನಿ ಸಭಾಂಗಣದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ವಕೀಲೆ ಅರೋಲಿನ್ ಡಿ’ಸೋಜಾ ಅವರನ್ನು ಸನ್ಮಾನಿಸಲಾಯಿತು
ಯುವವಾಹಿನಿ ಸಭಾಂಗಣದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ವಕೀಲೆ ಅರೋಲಿನ್ ಡಿ’ಸೋಜಾ ಅವರನ್ನು ಸನ್ಮಾನಿಸಲಾಯಿತು
Published on
ಮಂಗಳೂರು: ಬಾಲ ಕಾರ್ಮಿಕ ಪದ್ದತಿ ಸಾಮಾಜಿಕ ಪಿಡುಗಾಗಿದ್ದು, ಇದರ ನಿರ್ಮೂಲನೆಗೆ ಕಾನೂನಿನ ಅರಿವು ಅತ್ಯಗತ್ಯ ಎಂದು ವಕೀಲೆ ಅರೋಲಿನ್ ಡಿ’ಸೋಜಾ ಹೇಳಿದರು.
ಉರ್ವಸ್ಟೋರಿನ ಯುವವಾಹಿನಿ ಸಭಾಂಗಣದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದ ಸಂವಿಧಾನವು ಪ್ರತಿಯೊಬ್ಬ ಮಗುವಿಗೂ ಗೌರವಯುತವಾಗಿ ಬದುಕುವ ಹಕ್ಕನ್ನು ನೀಡಿದೆ. 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಅಪಾಯಕಾರಿ ಕೆಲಸ ಅಥವಾ ಕಾರ್ಖಾನೆಗಳಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಖಚಿತಪಡಿಸುತ್ತದೆ. ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯಿದೆ ಕಾನೂನನ್ನು ಉಲ್ಲಂಘಿಸಿ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳುವ ಮಾಲೀಕರಿಗೆ ದಂಡ ಹಾಗೂ ಜೈಲು ಶಿಕ್ಷೆಯ ಕಠಿಣ ಕಾನೂನು ಚೌಕಟ್ಟನ್ನು ಹೊಂದಿದೆ. ಕೇವಲ ಕಾನೂನುಗಳು ಮಾತ್ರ ಬಾಲ ಕಾರ್ಮಿಕ ಪದ್ಧತಿಯನ್ನು ತಡೆಯಲು ಸಾಧ್ಯವಿಲ್ಲ. ಸಾರ್ವಜನಿಕರಾದ ನಾವು ಜಾಗೃತರಾಗಬೇಕು. ನಮ್ಮ ಸುತ್ತಮುತ್ತ ಎಲ್ಲಾದರೂ ಮಕ್ಕಳು ದುಡಿಯುತ್ತಿರುವುದು ಕಂಡುಬಂದರೆ ತಕ್ಷಣ ಉಚಿತ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದರು.
ವಕೀಲೆ ಅರೋಲಿನ್ ಡಿ’ಸೋಜಾ ಅವರನ್ನು ಯುವವಾಹಿನಿ ಮಂಗಳೂರು ಘಟಕದ ವತಿಯಿಂದ ಗೌರವಿಸಲಾಯಿತು.
ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ.ಸುವರ್ಣ ಸ್ವಾಗತಿಸಿದರು, ಸದಸ್ಯರಾದ ಸತೀಶ್ ಜಿ.ಪಿ ವಂದಿಸಿದರು. ಘಟಕದ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಶಿಕ್ಷಣವೇ ಮಗುವಿನ ಅಸ್ತ್ರ

ಮಕ್ಕಳ ಮುಗ್ಧ ಬಾಲ್ಯವನ್ನು ಕದಿಯುವುದು ಅಪರಾಧ. ಶಿಕ್ಷಣವೇ ಪ್ರತಿಯೊಂದು ಮಗುವಿನ ಅಸ್ತ್ರವಾಗಬೇಕು. ಸಂಸ್ಥೆ, ಕೈಗಾರಿಕೆ, ಉತ್ಪಾದನಾ ಘಟಕಸೇರಿದಂತೆ ಹಲವಡೆ 14 ರಿಂದ 18 ವಯಸ್ಸಿನ ಮಕ್ಕಳನ್ನು ಕೆಲಸ ಮಾಡುವಂತಿಲ್ಲ. ಅಂತಹ ಸಂದರ್ಭದಲ್ಲಿ ಅಂದರೆ ತಮ್ಮದೇ ಆದ ವೈಯಕ್ತಿಕ ಕೌಟುಂಬಿಕ ಕೆಲಸದಲ್ಲಿ ಭಾಗಿಯಾಗಬಹುದು, ಆದರೆ ಅವರ ಶಿಕ್ಷಣದ ಮೇಲೆ ಪ್ರಭಾವ ಬೀರುವಂತಿರಬಾರದು. ಪ್ರತಿ ವರ್ಷ ಜೂನ್ 12 ರಂದು ನಾವು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಆಚರಿಸುತ್ತೇವೆ. ಮಕ್ಕಳ ಕೈಯಲ್ಲಿ ಉಪಕರಣಗಳು, ಹೋಟೆಲ್ ಪಾತ್ರೆಗಳ ಬದಲಿಗೆ ಪುಸ್ತಕ, ಲೇಖನಿ ಇರಬೇಕಾದದ್ದು ಅವರ ಹಕ್ಕು. ಆದರೆ ಇಂದಿಗೂ ಸಮಾಜದಲ್ಲಿ ಬಾಲ ಕಾರ್ಮಿಕ ಪದ್ಧತಿ ಜೀವಂತವಾಗಿರುವುದು ಕಳವಳಕಾರಿ ಸಂಗತಿ. ಈ ಪಿಡುಗನ್ನು ಬೇರುಸಹಿತ ಕಿತ್ತೊಗೆಯಲು ನಮಗೆ ಕಾನೂನಿನ ಅರಿವು ಅತ್ಯಗತ್ಯವಾಗಿದೆ ಎಂದು ವಕೀಲೆ ಅರೋಲಿನ್ ಡಿ’ಸೋಜಾ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net