

ತಿ.ನರಸೀಪುರ: ಜನರಲ್ಲಿ ಕಾನೂನಿನ ಅರಿವು ಇದ್ದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಪೊಲೀಸ್ ಇಲಾಖೆ ಏರ್ಪಡಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನರಲ್ಲಿ ಪೊಲೀಸರೆಂದರೆ ಸಾಮಾನ್ಯವಾಗಿ ಭಯ, ಹಿಂಜರಿಕೆ ಸಹಜವಾಗಿರುತ್ತದೆ. ಭಯ ಬಿಟ್ಟು ಧೈರ್ಯವಾಗಿ ಪೊಲೀಸರೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಬೇಕು. ಅವರಿಗೆ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಸಹಕಾರ ನೀಡಬೇಕು, ಕಾನೂನನ್ನು ಯಾರು ಗೌರವಿಸುತ್ತಾರೋ ಅವರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಕಾನೂನನ್ನು ಇನ್ನೊಬ್ಬರ ಒತ್ತಾಯಕ್ಕಾಗಲಿ, ಪೊಲೀಸರ ಭಯಕ್ಕಾಗಿ ಪಾಲಿಸುವುದನ್ನು ಬಿಟ್ಟು ತಮ್ಮ ಜೀವದ ರಕ್ಷಣೆಗಾಗಿ ಕಾನೂನು ಪಾಲನೆ ಮಾಡಬೇಕು. ಎಲ್ಲರ ರಕ್ಷಣೆಗಾಗಿಯೇ ಕಾನೂನುಗಳಿದ್ದು, ಸುರಕ್ಷತೆಗಾಗಿ ಕಾನೂನು ಪಾಲನೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಮೊಬೈಲ್ ಗೀಳಿನಿಂದ ಭವಿಷ್ಯ ಹಾಳು: ಶಾಲಾ-ಕಾಲೇಜಿನ ಮಕ್ಕಳು ಮೊಬೈಲ್ ಗೀಳಿನಿಂದಾಗಿ ಹಲವಾರು ಸಮಸ್ಯೆಗಳಿಗೆ ಸಿಲುಕಿಕೊಂಡಿರುವ ಉದಾಹರಣೆಗಳು ಕಣ್ಣ ಮುಂದಿವೆ. ಫೇಸ್‌ಬುಕ್, ವಾಟ್ಸ್‌ಆ್ಯಪ್ ಗೀಳಿನಿಂದಾಗಿ ಓದಿನ ಕಡೆ ಗಮನ ಕೇಂದ್ರೀಕರಿಸದೆ ಇರುವುದರಿಂದ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಮೊಬೈಲ್ ಬಳಕೆ ಕಡಿಮೆ ಮಾಡಿ ಓದಿನ ಕಡೆ ಹೆಚ್ಚು ಗಮನಹರಿಸಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಶಾಲಾ-ಕಾಲೇಜು ಹಂತದ ಮಕ್ಕಳ ಬೆರಳ ತುದಿಯಲ್ಲೇ ಎಲ್ಲ ಮಾಹಿತಿಗಳು ಸಿಗುತ್ತಿವೆ. ಇದು ತಂತ್ರಜ್ಞಾನ ಬೆಳವಣಿಗೆಗೆ ಎಷ್ಟು ಸಹಕಾರಿಯೋ ಹಾದಿ ತಪ್ಪಲು ಅಷ್ಟೇ ಕಾರಣವಾಗುತ್ತದೆ. ವಿಜ್ಞಾನ, ತಂತ್ರಜ್ಞಾನವನ್ನು ವಿದ್ಯಾರ್ಜನೆಗೆ ಬಳಸಿಕೊಂಡವರು ಸಮಾಜದಲ್ಲಿ ಉನ್ನತ ಮಟ್ಟಕ್ಕೇರಿದರೆ, ಅದನ್ನು ದುರ್ಬಳಕೆ ಮಾಡಿಕೊಂಡವರು ತಪ್ಪು ಮಾಡಿ ಕಾನೂನಿನ ಕುಣಿಕೆಗೆ ಸಿಲುಕಿ ನಲುಗುತ್ತಿದ್ದಾರೆ. ಹಾಗಾಗಿ ಈ ವಿಷಯದಲ್ಲಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.
ಲೈಂಗಿಕ ದೌರ್ಜನ್ಯ ನಡೆದರೆ ಮಾಹಿತಿ ನೀಡಿ: ತಾಲೂಕಿನಲ್ಲಿ ಎಲ್ಲೇ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡುವ ಧೈರ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಹಾಗಾದಾಗ ಮಾತ್ರವೇ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುತ್ತದೆ. ಯಾರೋ ಅಪರಿಚಿತರು ಕರೆದಾಗ ಹೋಗುವುದು,ಅವರೊಂದಿಗೆ ವ್ಯವಹರಿಸುವುದು ತಪ್ಪು ಎಂದ ಸೀಮಾ ಲಾಟ್ಕರ್, ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಸವಾರರು ತಪ್ಪದೆ ಹೆಲ್ಮೆಟ್ ಧರಿಸಬೇಕು, ನಾಲ್ಕು ಚಕ್ರ ವಾಹನಗಳನ್ನು ಚಲಾಯಿಸುವ ಸವಾರರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಇದರಿಂದ ಅಪಘಾತ ಸಂಭವಿಸಿದಾಗ ಜೀವಕ್ಕೆ ಅಪಾಯ ಕಡಿಮೆಯಾಗುತ್ತದೆ. ಸಮಾಜದ ರಕ್ಷಣೆಗೆ ಪೊಲೀಸ್ ಇಲಾಖೆ ಸದಾ ಸನ್ನದ್ಧವಾಗಿರುತ್ತದೆ ಎಂದು ತಿಳಿಸಿದರು.
ಪ್ರಾಂಶುಪಾಲ ಜಗದೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಶ್ರೀಗುಂಜಾ ನರಸಿಂಹಸ್ವಾಮಿ ದೇವಾಲಯದ ಮುಂಭಾಗ ಸ್ವತಃ ಬೈಕ್ ಸವಾರಿ ಮಾಡುವ ಮೂಲಕ ರ‌್ಯಾಲಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಚಾಲನೆ ನೀಡಿದರು.
ಪೊಲೀಸ್ ಮಾಹಿತಿದಾರರಾದ ರವಿ, ಮಾದೇಶ್, ಶಂಕರ್, ಅನಾಥ ಶವಗಳ ಮುಕ್ತಿದಾತ ಡಾ.ಮಾದೇಶ್, ರೈಸ್‌ಮಿಲ್ ಉದ್ಯಮಿ ಮಹಮ್ಮದ್ ನಯಿಮುಲ್ಲಾ ಅವರನ್ನು ಸನ್ಮಾನಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ರಕ್ಷಿತಾ, ಚಂದನಾ, ಪವನಾ, ರಾಜಶೇಖರ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸರ್ಕಲ್ ಇನ್‌ಸ್ಪೆಕ್ಟರ್ ಧನಂಜಯ, ಸಬ್ ಇನ್‌ಸ್ಪೆಕ್ಟರ್ ಜಗದೀಶ್ ಧೂಳ್‌ಶೆಟ್ಟಿ, ಪ್ರಾಂಶುಪಾಲೆ ಬಿ.ಪಿ.ಇಂದಿರಾ, ಉಪನ್ಯಾಸಕರಾದ ವೆಂಕಟೇಶಮೂರ್ತಿ, ರಾಮಮೂರ್ತಿ ಮತ್ತಿತರರು ಹಾಜರಿದ್ದರು.