ಸೈನಿಕ ಹುಳು ಹತೋಟಿ ಕ್ರಮಗಳ ಬಗ್ಗೆ ಜಾಗೃತಿ

ಸೈನಿಕ ಹುಳು ಹತೋಟಿ ಕ್ರಮಗಳ ಬಗ್ಗೆ ಜಾಗೃತಿ
Published on

ಬೈಲಕುಪ್ಪೆ: ಮುಸುಕಿನ ಜೋಳಕ್ಕೆ ಸೈನಿಕ ಹುಳುಗಳ ಕಾಟ ಎದುರಾದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೈ.ಪ್ರಸಾದ್ ನೇತೃತ್ವದಲ್ಲಿ ಪಿರಿಯಾಪಟ್ಟಣ ತಾಲೂಕಿನ ನವಿಲೂರು ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ಹತೋಟಿ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಸಾದ್ ಮಾತನಾಡಿ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮುಸುಕಿನ ಜೋಳವು ಪ್ರಮುಖ ಬೆಳೆಯಾಗಿದ್ದು, ತಾಲೂಕಿನಾದ್ಯಂತ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದೆ. ಈಗಾಗಲೇ ಬಿತ್ತನೆಯಿಂದ ಹಿಡಿದು 20-25 ದಿನದ ಬೆಳೆವರೆಗೂ ಅಲ್ಲಲ್ಲಿ ಸೈನಿಕ ಹುಳುವಿನ ಬಾಧೆ ಕಂಡು ಬಂದಿದ್ದು, ರೈತರು ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮವನ್ನು ಕಾಯ್ದುಕೊಳ್ಳಬೇಕು ಎಂದು ಹೇಳಿದರು.

ಫಾಲ್ ಸೈನಿಕ ಹುಳುವಿನ ಗುರುತಿಸುವಿಕೆ: ಮರಿ ಹುಳು ಹಸಿರು ಬಣ್ಣದಲ್ಲಿದ್ದು, ತಲೆಯ ಮೇಲ್ಭಾಗದಲ್ಲಿ ತಲೆಕೆಳಗಾದ ಙ ಚಿಹ್ನೆಯನ್ನು ಹೊಂದಿರುತ್ತದೆ. ಇದರ ಉದರದ 8 ಮತ್ತು 9ನೇ ಭಾಗದಲ್ಲಿ ನಾಲ್ಕು ಉಬ್ಬಿದ ಕಪ್ಪು ಚುಕ್ಕೆಗಳು ಚೌಕಾಕರದ ರೀತಿಯಲ್ಲಿ ಕಂಡುಬರುತ್ತದೆ. ಒಂದುವರೆ ಇಂಚು ಉದ್ದದ ಹುಳವು ಪತಂಗಗಳಾಗಿ ಸಾವಿರಾರು ಸಂಖ್ಯೆಗಳಲ್ಲಿ ಆಹಾರವನ್ನು ಹುಡುಕಿಕೊಂಡು ಬಹಳ ದೂರ ಸಾಗಿ ಆಹಾರ ಬೆಳೆಯಿರುವ ಪ್ರದೇಶಗಳಲ್ಲಿ ಗಿಡಗಳ ಎಲೆಗಳ ಮೇಲೆ ಮೊಟ್ಟೆಗಳನ್ನು ಇಡುತ್ತವೆ.

ಒಂದು ಹೆಣ್ಣು ಪತಂಗವು ಸರಾಸರಿ 150 ರಿಂದ 200 ಹಸಿರು ಮಿಶ್ರಿತ ಮೊಟ್ಟೆಗಳನ್ನು ಗರಿಯ ತಳಭಾಗದಲ್ಲಿ ಗುಂಪು ಗುಂಪಾಗಿ ಇಡುತ್ತವೆ. 4-5 ದಿನಗಳ ನಂತರ ಮೊಟ್ಟೆ ಒಡೆದು ಮರಿಗಳು ಹೊರಬಂದು 18-28 ದಿನಗಳವರೆಗೆ ಬೆಳೆಗಳಿಗೆ ಹಾನಿ ಮಾಡುತ್ತವೆ ಮತ್ತು 7-13 ದಿನಗಳಲ್ಲಿ ಮಣ್ಣಿನಲ್ಲಿ ಕೋಶಾ ವ್ಯವಸ್ಥೆಯಲ್ಲಿರುತ್ತವೆ. ಒಟ್ಟು 30-45 ದಿನಗಳಲ್ಲಿ ಸೈನಿಕ ಹುಳು ಜೀವನ ಚಕ್ರವನ್ನು ಪೂರ್ಣಗೊಳಿಸುತ್ತವೆ.

ಈ ಕೀಟವು ಹಗಲು ವೇಳೆಯಲ್ಲಿ ಮಣ್ಣು, ಕಾಂಡದ ಮಧ್ಯ ಮತ್ತು ಗರಿಗಳ ತಳ ಭಾಗದಲ್ಲಿ ವಾಸಿಸುತ್ತವೆ. ಸಂಜೆಯ ವೇಳೆ ಹುಳುಗಳು ಚಟುವಟಿಕೆ ಪ್ರಾರಂಭಿಸಿ ಬೆಳೆಯ ಎಲೆಯನ್ನು ಸಂಪೂರ್ಣವಾಗಿ ತಿಂದು ಹಾಕುತ್ತವೆ. ತೀವ್ರವಾಗಿ ಹಾನಿಗೊಳಗಾದ ಬೆಳೆಯಲ್ಲಿ ಎಲೆಯ ದಿಂಡು ಕಾಣಸಿಗುತ್ತವೆ ಎಂದು ತಿಳಿಸಿದರು

ಹತೋಟಿ ಕ್ರಮ: ಸ್ಪೋಡೋಪ್ಟೆರಾ ಪ್ರೂಜಿಪರ್ಡಾ ಫೆರಮೋನ್ ಟ್ರಾಪ್ (ಮೋಹಕ ಬಲೆಗಳು)- 8 ಸಂಖ್ಯೆ ಪ್ರತಿ ಎಕರೆಗೆ ಬಿತ್ತನೆಯಾದ ಒಂದು ವಾರದಿಂದ ತೆನೆಯ ಹಂತದವರೆಗೆ ಅಳವಡಿಸಬೇಕು. ಮೋಹಕ ಬಲೆಯ ರಾಸಾಯನಿಕವನ್ನು/ ಲ್ಯೂರ್‌ನ್ನು ಪ್ರತಿ 20 ದಿನಗಳಿಗೊಮ್ಮೆ ಬದಲಾಯಿಸುವುದು.

ತತ್ತಿನಾಶಕ ಕೀಟನಾಶಕವಾದ ಥೈಯೋಡಿಕಾರ್ಬ್ 25 ಡಬ್ಲೂ. ಪಿ. (ಲಾರ್ವಿನ್) 1 ಗ್ರಾಂ./ಲೀಟರ್ ಗರಿಗಳ ಮೇಲ್ಭಾಗ ಮೊಟ್ಟೆಗಳ ಗುಂಪು ಕಂಡುಬದಾಗ ಸಿಂಪಡಿಸುವುದು. ಆರ್ಥಿಕ ನಷ್ಟ ರೇಖೆಗೆ ಅನುಗುಣವಾಗಿ ಇಮಾಮೆಕ್ಟೆನ್ ಬೆಂಜೋಯೇಟ್ 5% ಎಸ್.ಜಿ. 0.6 ಗ್ರಾಂ/ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.

ಕೀಟ ಬಾಧೆಯೂ ಹೆಚ್ಚಾದಾಗ ರಾಸಾಯನಿಕ ಕೀಟನಾಶಕಗಳಾದ ನೊವಲ್ಯೂರಾನ್ + ಇಮಾಮೆಕ್ಟಿನ್ ಬೆಂಜೋಯೇಟ್ (ಬ್ಯಾರಾಜೈಡ್) 3 ಮಿ.ಲೀ/ಲೀಟರ್ ಅಥವಾ ಸ್ಪೆ ನೋಡೋರಮ್ 11.2% ಎಸ್.ಪಿ. 0.5 ಮಿಲಿ/ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು.

ಯಾವುದೇ ಸಂಶಯಗಳಿಗಾಗಿ ಹಾಗೂ ಇತರೇ ಹೆಚ್ಚಿನ ಮಾಹಿತಿಗೆ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿನ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದರು.

ನೂರಾರು ರೈತರು ಸೈನಿಕ ಹುಳುಗಳು ಮುಸುಕಿನ ಜೋಳಕ್ಕೆ ಅಂಟಿರುವ ರೋಗ ಬಾಧೆ ಕುರಿತು ಮಾಹಿತಿ ಪಡೆದರು. ಕೃಷಿ ಇಲಾಖೆ ಸಿಬ್ಬಂದಿ ಹಾಗೂ ನವಿಲೂರು ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net