ದೇವರನ್ನು ತೆಗಳಿದವರಿಗೆ ಪ್ರಶಸ್ತಿ, ಸನ್ಮಾನ

14 SRS 6
Published on

 ಶಿರಸಿ: ಸರ್ಕಾರ ಎಡಪಂಥಿ ಕವಿಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದು, ದೇವರನ್ನು ತೆಗಳಿದವರಿಗೆ ಮಾತ್ರ ಸರ್ಕಾರ ಸನ್ಮಾನ, ಪ್ರಶಸ್ತಿ ನೀಡುತ್ತಿದೆ. ಈ ಧೋರಣೆ ಬದಲಾಗಬೇಕಿದೆ ಎಂದು ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಆರೋಪಿಸಿದರು.

ನಗರದ ನೆಮ್ಮದಿ ಕುಟೀರದ ರಂಗಧಾಮದಲ್ಲಿ ಶನಿವಾರ ಮಾಸ್ಕೇರಿ ಸಾಹಿತ್ಯಾರಾಧನ ಸಂಸ್ಥೆ, ಸಾಹಿತ್ಯ ಸಂಚಲನದ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸರಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತಿಗಳಿಗೆ ಸನ್ಮಾನ, ಗೌರವ, ಪ್ರಶಸ್ತಿ ಲಭಿಸುವುದು ಅವರು ಸಾಧಿಸಿದ ಮಹಾನ್ ಸಾಧನೆಗೆ. ಆದರೆ, ಈಗಿನ ಕಾಲಮಾನ ಬೇರೆಯಾಗಿದೆ. ಇದೀಗ ಹಿಂದು ದೇವರುಗಳಿಗೆ ಬೈದರೆ, ಹಿಂದು ಭಾವನೆಗೆಳಿಗೆ ಧಕ್ಕೆ ತಂದರೆ ಮಾತ್ರ ಅಂತವರನ್ನು ಗುರುತಿಸಿ ಸರ್ಕಾರ ಪ್ರಶಸ್ತಿ, ಗೌರವ ನೀಡುತ್ತಿದೆ. ನೀವು ಸಾಹಿತಿ ಎಂದು ಗುರುತಿಸಿಕೊಳ್ಳಬೇಕಾದರೆ ದೇವರಿಗೆ ಬೈಯ್ಯಬೇಕು. ಹಿಂದುಗಳಿಗೆ ಅವಮಾನ ಮಾಡಬೇಕು. ಈ ಮನಸ್ಥಿತಿ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಇದು ನಮ್ಮ ದೌರ್ಭಾಗ್ಯವೇ ಸರಿ. ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ ಯಾರೊಬ್ಬರಿಗೂ ಸರ್ಕಾರ ಪ್ರಶಸ್ತಿ ನೀಡಿಲ್ಲ, ಆದರೆ, ಸಾಹಿತಿಗಳ ಸೋಗಿನಲ್ಲಿ ಹಿಂದು ದೇವರಿಗೆ ತೆಗಳುವ ಹಾಗೂ ಹಿಂದುಗಳ ಭಾವನೆಗೆ ಧಕ್ಕೆ ತರುವ ವ್ಯಕ್ತಿಗಳಿಗೆ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷರಾಗಿ ಮಧುರ ಕವಿ ವನರಾಗ ಶರ್ಮ ಭಾಗವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಾನಪದ ಅಕಾಡೆಮಿ ಜಿಲ್ಲಾಧ್ಯಕ್ಷ ಡಾ. ವೆಂಕಟೇಶ ನಾಯ್ಕ, ಪ್ರಗತಿಪರ ಕೃಷಿಕ ರಾಮು ಕಿಣಿ, ಸಾಹಿತ್ಯ ಸಂಚಲನ ಅಧ್ಯಕ್ಷ ಕೃಷ್ಣ ಪದಕಿ, ಸಾಹಿತಿ ಮಹೇಶಕುಮಾರ ಹನಕೆರೆ, ಕವಯತ್ರಿ ಪಿ.ಸಿ. ದಾಕ್ಷಾಯಿಣಿ ಉಪಸ್ಥಿತರಿದ್ದರು. ಇದೇ ವೇಳೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಏಳು ಮಂದಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net