ಆದಿವಾಸಿ ಮುಖಂಡನಿಗೆ ಪ್ರಶಸ್ತಿ ಸಿಕ್ಕಿದ್ದು ಹೆಮ್ಮೆ

07HDK01
Published on

ಎಚ್.ಡಿ.ಕೋಟೆ: ಆದಿವಾಸಿ ಮುಖಂಡ ಸೋಮಣ್ಣ ಅವರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ದೊರಕಿರುವುದು ತಾಲೂಕಿಗೆ ಹೆಮ್ಮೆ ತಂದಿರುವ ವಿಚಾರ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್ ತಿಳಿಸಿದರು.


ಪಟ್ಟಣದ ಪತ್ರಕರ್ತರ ಭವನದಲ್ಲಿ ಮಂಗಳವಾರ ವಾಲ್ಮೀಕಿ ಪ್ರಶಸ್ತಿಗೆ ಭಾಜನರಾದ ಮೊತ್ತ ಹಾಡಿಯ ಆದಿವಾಸಿ ಮುಖಂಡ ಸೋಮಣ್ಣ ಅವರಿಗೆ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಗ್ರಂಥವನ್ನು ರಚಿಸಿದಂತ ಮಹಾನ್ ವ್ಯಕ್ತಿಯ ಹೆಸರಿನಲ್ಲಿರುವ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಯು ಮೊತ್ತ ಹಾಡಿಯ ಆದಿವಾಸಿ ಮುಖಂಡ ಸೋಮಣ್ಣ ಅವರಿಗೆ ದೊರಕಿರುವುದು ತಾಲೂಕು ಹೆಮ್ಮೆ ಪಡುವ ಸಂಗತಿಯಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.


ಸೋಮಣ್ಣ ಅವರು ಆದಿವಾಸಿಗಳ ಸಂಘಟನೆ ಮಾಡುವ ನಿಟ್ಟಿನಲ್ಲಿ ತೊಡಗಿಸಿಕೊಂಡಿದ್ದಾರೆ. ಆದಿವಾಸಿಗಳ ಅಭಿವೃದ್ಧಿಗೆ ಹೋರಾಟ, ಆದಿವಾಸಿಗಳಿಗೆ ಜಮೀನು ದೊರಕಿಸಿ ಕೊಡುವಲ್ಲಿ ಸತತ ಪ್ರಯತ್ನ ಮಾಡಿರುವುದು ಸೇರಿದಂತೆ ಹಲವು ಪರಿಣಾಮಕಾರಿ ಯೋಜನೆಗಳ ಅನುಷ್ಠಾನಕ್ಕೆ ಹೋರಾಡಿದ ಹಿನ್ನೆಲೆಯಲ್ಲಿ ಪ್ರಶಸ್ತಿ ದೊರಕಿದೆ ಎಂದರು.


ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಸೋಮಣ್ಣ ಮಾತನಾಡಿ, ನಾನು ಬಡತನ ರೇಖೆಗಿಂತ ಕೆಳ ಇರುವ ಕುಟುಂಬದಲ್ಲಿ ಜನಿಸಿ ಬಾಲ್ಯದಿಂದಲೇ ಹಲವು ಸಮಸ್ಯೆಗಳನ್ನು ಎದುರಿಸುತ್ತಾ ಬೆಳೆದ ಹಿನ್ನೆಲೆಯಲ್ಲಿ ನನಗೆ ಆದಿವಾಸಿಗಳ ಸಂಕಷ್ಟಗಳು ಅರಿವಾದವು. ಈ ಹಿನ್ನೆಲೆಯಲ್ಲಿ ನಾನು ಆದಿವಾಸಿಗಳ ಅಭಿವೃದ್ಧಿಗೆ ಮತ್ತು ಸಂಘಟನೆಗೆ ಹೆಚ್ಚು ಒತ್ತು ನೀಡಿ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದೆ. ಇದನ್ನು ಮನಗಂಡ ಸರ್ಕಾರ ವಾಲ್ಮೀಕಿ ಕರ್ನಾಟಕ ರಾಜ್ಯ ಪ್ರಶಸಿ ನೀಡಿದೆ ಎಂದು ತಿಳಿಸಿದರು.


ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬೀಚನಹಳ್ಳಿ ಮಂಜು, ಉಪಾಧ್ಯಕ್ಷ ಮಹೇಶ, ಪ್ರಧಾನ ಕಾರ್ಯದರ್ಶಿ ನಾಗರಾಮ, ಸಹ ಕಾರ್ಯದರ್ಶಿ ದೊಡ್ಡಸಿದ್ದು, ಖಜಾಂಚಿ ಮಂಜು ಕೋಟೆ, ನಿರ್ದೇಶಕರಾದ ರೇಣುಕಾ, ರವಿ ಆರಾಧ್ಯ, ಪುಟ್ಟರಾಜು, ಹಂಪಾಪುರ ನಾಗೇಶ್, ಜಿ.ರವಿಕುಮಾರ್, ರಂಗರಾಜು ಸದಸ್ಯರಾದ ಸತೀಶ್ ಆರಾಧ್ಯ, ಕನ್ನಡ ಪ್ರಮೋದ್, ನಂದಕುಮಾರ್ ಶೈಲಿ, ಶ್ರೀನಿಧಿ, ಪುರುಷೋತ್ತಮ, ಶರವಣ, ಚಂದ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net