ಸಿಐಡಿಯಿಂದ ವಿನೂತನ ಕಾರ್ಯಕ್ರಮ: ಉತ್ತಮ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಮಾಸದ ಪ್ರಶಸ್ತಿ

cid
Published on

ಬೆಂಗಳೂರು: ರಾಜ್ಯ ಅಪರಾಧ ತನಿಖಾ ದಳದಲ್ಲಿ (ಸಿಐಡಿ) ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಪ್ರೋತ್ಸಾಹ ತುಂಬಲು ಸಿಐಡಿಯಲ್ಲಿ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಸಿಐಡಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವರ ಪೈಕಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗೆ ‘ಮಾಸದ ಅತ್ಯುತ್ತಮ ಸಿಬ್ಬಂದಿ’ ಎಂದು ಗುರುತಿಸಿ ಅವರಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ಅಲ್ಲದೆ, ಸಿಐಡಿ ಆವರಣದಲ್ಲಿ ಇರುವ ಮೂರು ಕಟ್ಟಡಗಳಲ್ಲಿ ಅವರ ಫೋಟೋ ಪ್ರದರ್ಶನ ಮಾಡುವುದರ ಜತೆಗೆ ಸರಳ ಸಮಾರಂಭದಲ್ಲಿ ಅವರಿಗೆ ಪ್ರಶಂಸನ ಪತ್ರ ಕೊಟ್ಟು ಗೌರವಿಸುವ ಪದ್ಧತಿಯನ್ನು ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ಜಾರಿಗೆ ತಂದಿದ್ದಾರೆ.
ಇದರಲ್ಲಿ ಸ್ಪೀಪರ್, ಕಾನ್‌ಸ್ಟೆಬಲ್‌ನಿಂದ ಹಿಡಿದು ಸಹಾಯಕ ಸಬ್ ಇನ್‌ಸ್ಪೆಕ್ಟರ್ ದರ್ಜೆಯ ನೌಕರರಿಗೆ ಮಾತ್ರ ನೀಡಲಾಗುವುದು. ಫೆಬ್ರವರಿ ಮಾಸದಲ್ಲಿ ಸಿಐಡಿ ಎಸ್ಟೇಟ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಸ್ಪೀಪರ್‌ಗಳಾದ ಎಸ್.ಸವಿತಾ ಮತ್ತು ಪದ್ಮಾವತಿ ಅವರು ಅತ್ಯುತ್ತಮ ಮಾಸದ ಸಿಬ್ಬಂದಿ ಪ್ರಶಂಸೆ ಪಾತ್ರರಾಗಿದ್ದಾರೆ. ಸಿಐಡಿ ಆವರಣ ಮತ್ತು ಉದ್ಯಾನವನವನ್ನು ಸ್ವಚ್ಛ ಮಾಡುವಲ್ಲಿ ಅತ್ಯುತ್ತಮವಾಗಿ ನಿರ್ವಹಣೆ ಮಾಡಿದ್ದಾರೆ. ಜತೆಗೆ ೨೦೨೪ರ ಗಣರಾಜ್ಯೋತ್ಸವಕ್ಕೆ ಧ್ವಜ ಸ್ತಂಭವನ್ನು ಅತ್ಯುತ್ತಮವಾಗಿ ಅಲಂಕಾರ ಮಾಡಿದ್ದನ್ನು ಹಿರಿಯ ಅಧಿಕಾರಿಗಳು ಗುರುತಿಸಿ ಮಾಸದ ಪ್ರಶಂಸನ ಪ್ರಮಾಣ ಪತ್ರ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net