ಪ್ರಶಸ್ತಿ ಪಡೆಯುವುದಕ್ಕಿಂತ ಖರೀದಿಯೇ ಜೋರಾಗಿದೆ! ಚಿತ್ರರಂಗದ ಕರಾಳ ಸತ್ಯ ಬಿಚ್ಚಿಟ್ಟ ನಟಿ ಶಮಾ

ವಿಜಯವಾಣಿ-2024-09-21T133448.370-1
Published on

ಮುಂಬೈ: ಸದಾ ತಮ್ಮ ಹಾಟ್​ ಲುಕ್​ನಿಂದಲೇ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದ ಬಾಲಿವುಡ್​ ನಟಿ ಶಮಾ ಸಿಕಂದರ್​, ಪ್ರಥಮ ಬಾರಿಗೆ ಚಿತ್ರರಂಗದ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದಾರೆ. ಸಿನಿ ಇಂಡಸ್ಟ್ರಿಯಲ್ಲಿ ತಾನು ಅನುಭವಿಸಿದ ಅಹಿತಕರ ಘಟನೆಯೊಂದರ ಬಗ್ಗೆ ಮುಕ್ತವಾಗಿ ಮಾತನಾಡಿದ ಶಮಾ, ಆ ಸ್ಟಾರ್​ ನಟನ ಜತೆ ಇನ್ಯಾವತ್ತು ನಟಿಸಲು ಬಯಸುವುದಿಲ್ಲ ಎಂಬ ಶಾಕಿಂಗ್ ಹೇಳಿಕೆ ನೀಡಿ, ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ಈ ವಿಷಯ ಮಾಸುವ ಮುನ್ನವೇ ಇದೀಗ ನಟಿಯ ಮತ್ತೊಂದು ಸ್ಫೋಟಕ ಹೇಳಿಕೆ ಚಿತ್ರರಂಗದ ಕರಾಳ ಮುಖವನ್ನು ಕಳಚಿಟ್ಟಿದೆ ಎಂದೇ ಹೇಳಬಹುದು.

ಸದಾ ಆನ್​ಲೈನ್​ನಲ್ಲಿ ಸಕ್ರಿಯರಾಗಿರುವ ನಟಿ ಒಂದು ಆ್ಯಡ್​ ಶೂಟ್​ನ ಚಿತ್ರೀಕರಣದಲ್ಲಿ ಸ್ಟಾರ್​ ನಟನೊಬ್ಬ ತನ್ನೊಂದಿಗೆ ನಡೆದುಕೊಂಡ ರೀತಿ ಬಹಳ ಮುಜುಗರಕ್ಕೆ ಒಳಗಾಗುವಂತೆ ಮಾಡಿತು ಎಂದು ಹೇಳುತ ಅತೀವ ಬೇಸರ ವ್ಯಕ್ತಪಡಿಸಿದರು. “ಒಬ್ಬ ಸ್ಟಾರ್​ ನಟನೊಂದಿಗೆ ಆ್ಯಡ್​ ಶೂಟ್​ ಇತ್ತು. ಮೊದ ಮೊದಲು ಬಹಳ ಖುಷಿಯಿಂದ ಪಾಲ್ಗೊಂಡಿದ್ದೆ. ಆದ್ರೆ, ಚಿತ್ರೀಕರಣ ನಡೆಯುತ್ತಿದ್ದ ವೇಳೆ ಆತ ನನ್ನನ್ನು ಬಿಗಿದಪ್ಪಿಕೊಂಡ. ನನಗೆ ಬಹಳ ಅಚ್ಚರಿ ಉಂಟಾಯಿತು. ಏಕೆಂದರೆ, ಅದರಲ್ಲಿ ಅಪ್ಪಿಕೊಳ್ಳುವ ಯಾವುದೇ ಸನ್ನಿವೇಶ ಇರಲಿಲ್ಲ. ಇದು ನನಗೆ ತೀವ್ರ ಮುಜುಗರ ಉಂಟುಮಾಡಿತು. ಆತ ನನ್ನನ್ನು ತಬ್ಬಿಕೊಳ್ಳುವ ಆಸೆಯಿಂದಲೇ ಹೀಗೆ ಮಾಡಿದ ಎಂಬುದು ನನಗೆ ಖಚಿತವಾಯಿತು” ಎಂದರು. ಸದ್ಯ ಈ ಹೇಳಿಕೆಯ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸಂಗತಿ ಹಂಚಿಕೊಂಡ ನಟಿ, ಚಿತ್ರರಂಗದಲ್ಲಿ ಅವಾರ್ಡ್​ ಪಡೆಯುವವರಿಗಿಂತ ಪ್ರಶಸ್ತಿ ಖರೀದಿ ಮಾಡುವವರ ಸಂಖ್ಯೆಯೇ ಹೆಚ್ಚಿದೆ ಎಂದಿದ್ದಾರೆ.

"ಈ ಹಿಂದೆ ಪ್ರಶಸ್ತಿ ಪಡೆಯಲು ಚಿತ್ರರಂಗದಲ್ಲಿ ಭಾರೀ ಕಸರತ್ತು ಮಾಡಬೇಕಿತ್ತು. ದೊಡ್ಡ ಪೈಪೋಟಿಯೇ ನಡೆಯುತ್ತಿತ್ತು. ಆದ್ರೆ, ಈಗ ಆ ರೀತಿ ಇಲ್ಲ. ಸಿನಿ ಪ್ರಶಸ್ತಿ ಸಮಾರಂಭಗಳಿಗೆ ಅದ್ಧೂರಿಯಾಗಿ ಎಂಟ್ರಿ ಕೊಡುವ ಕಲಾವಿದರು, ಅವಾರ್ಡ್​ಗಳನ್ನು ನ್ಯಾಯವಾಗಿ ಪಡೆಯುವುದಕ್ಕಿಂತ ಅದನ್ನು ಖರೀದಿ ಮಾಡುವುದರಲ್ಲಿ ತೊಡಗಿದ್ದಾರೆ. ಇದು ದಂಧೆಯಂತೆ ಆಗೋಗಿದೆ. ಇದ್ಯಾವುದು ಇಂದಿನ ಸಮಸ್ಯೆಯಲ್ಲ. ಹಲವಾರು ವರ್ಷಗಳಿಂದಲೂ ನಡೆಯುತ್ತಿದೆ. ಈ ಬಗ್ಗೆ ಸ್ವತಃ ಶಾರೂಖ್​ ಖಾನ್ ಅವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಅದಕ್ಕಿಂತ ಮತ್ತೊಂದು ಸಾಕ್ಷಿ ಬೇಕೇ?" ಎಂದು ಹೇಳಿದರು.

"ಸಾರ್ವಜನಿಕವಾಗಿ ಆ ರೀತಿ ಹೇಳಲು ತುಂಬಾ ಪ್ರಾಮಾಣಿಕತೆ ಮತ್ತು ಧೈರ್ಯ ಇರಬೇಕು. ಆಗ ಒಬ್ಬ ಕಲಾವಿದನಿಗೆ ಪ್ರಶಸ್ತಿ ಕೊಡುತ್ತಿದ್ದಾರೆ ಎಂದರೆ ಅದು ಮೆಚ್ಚುಗೆ, ಪ್ರಶಂಸೆ ವ್ಯಕ್ತಪಡಿಸುವ ವಿಧಾನವಾಗಿತ್ತು. ಈಗ ಅದ್ಯಾವುದು ಉಳಿದಿಲ್ಲ. ಈ ಪ್ರಶಸ್ತಿ​ ಸಮಾರಂಭಗಳು ಬ್ಯುಸಿನೆಸ್​ ಬಿಟ್ಟರೆ ಬೇರೇನೂ ಅಲ್ಲ. ಇಂತಹ ಕಾರ್ಯಕ್ರಮಗಳ ಬಗ್ಗೆ ಯಾರೂ ಕೂಡ ತಲೆಕೆಡಿಸಿಕೊಳ್ಳೋದಿಲ್ಲ. ತಮ್ಮ ಡಿಸೈನರ್​ ಕೊಡುವ ಅದ್ಧೂರಿ ಉಡುಗೆಯನ್ನು ತೊಟ್ಟು ಸಮಾರಂಭಕ್ಕೆ ಹಾಜರಾಗುವ ಸೆಲೆಬ್ರಿಟಿಗಳು, ಫೋಟೋಗೆ ಪೋಸ್ ಕೊಟ್ಟು, ಬ್ರ್ಯಾಂಡಿಂಗ್ ಮಾಡಿ ಹೋಗ್ತಾರೆ ಅಷ್ಟೇ" ಎಂದು ಹೇಳಿದ್ದಾರೆ. ಸದ್ಯ ನಟಿಯ ಶಾಕಿಂಗ್ ಹೇಳಿಕೆಗಳು ಜಾಲತಾಣಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net