

ಬೆಂಗಳೂರು ಕಾನೂನನ್ನು ಹೇಗೆ ಅಧ್ಯಯನ ಮಾಡುತ್ತೀರಿ ಮತ್ತು ಹೇಗೆ ಪ್ರಾಕ್ಟೀಸ್ ಮಾಡುತ್ತೀರೆಂಬುದರ ಮೇಲೆ ವೃತ್ತಿ ನಿರ್ಧಾರವಾಗಲಿದೆ. ಕಾಲೇಜುಗಳಲ್ಲಿ ಪಡೆದಿರುವ ಅಂಕಗಳು ಲೆಕ್ಕವಾಗುವುದಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಆರ್. ದೇವದಾಸ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ಆರ್.ವಿ. ಇನ್‌ಸ್ಟಿಟ್ಯೂಟ್ ಆ್ ಲೀಗಲ್ ಸ್ಟಡೀಸ್ ಭಾನುವಾರ ಜೆ.ಪಿ. ನಗರದ ಆರ್.ವಿ. ದಂತ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ಪದವಿ ವ್ಯಾಸಂಗ ಮಾಡುತ್ತಿರುವ ಸಾಕಷ್ಟು ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಚಿಂತನೆ ಮಾಡುತ್ತಾರೆ. ಇಂತಹ ಆಲೋಚನೆಗಳು ಒಂದು ರೀತಿಯಲ್ಲಿ ಸರಿ ಎನಿಸಿದರೂ ಅಂತಿಮವಾಗಿ ತಮ್ಮ ಕಾನೂನು ಪ್ರಾಕ್ಟೀಸ್ ಬಹಳ ಮುಖ್ಯ ಎಂದು ಸಲಹೆ ನೀಡಿದರು.
ದೇಶದಲ್ಲಿ ಶ್ರೇಷ್ಠ ಸಂವಿಧಾನ, ಬಲವಾದ ನ್ಯಾಯಾಂಗ ವ್ಯವಸ್ಥೆ, ಉತ್ತಮ ಆಡಳಿತವಿರುವ ಕಾರಣ ದೇಶದ ಜನರು ಆರಾಮಾಗಿ ಓಡಾಡುವುದು, ಯಾವುದೇ ವಿಷಯ ಕುರಿತು ಹಿಂಜರಿಕೆಯಿಲ್ಲದೆ ಮಾತನಾಡಲು ಸಾಧ್ಯವಾಗಿದೆ. ಆದರೆ, ಹಲವು ರಾಷ್ಟ್ರಗಳಲ್ಲಿ ಪ್ರಜಾಸತ್ತಾತ್ಮಕವಾಗಿ ನಿಯಮಗಲಿದ್ದರೂ ಜನರು ಮಾನವ ಹಕ್ಕುಗಳು, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ನಿಜವನ್ನು ಹೇಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ನಾವೆಲ್ಲರೂ ನಮ್ಮ ನೆರೆ ರಾಷ್ಟ್ರಗಳಲ್ಲಿ ಏನಾಗುತ್ತಿದೆ ಎಂಬುದನ್ನು ನೋಡುತ್ತಿದ್ದೇವೆ. ಅಲ್ಲಿನ ಚುನಾವಣೆ, ನ್ಯಾಯಾಂಗ ವ್ಯವಸ್ಥೆ ಹೇಗಿದೆ ಎಂಬುದನ್ನು ನೋಡುತ್ತಿದ್ದೇವೆ. ಹೀಗಾಗಿ ದೇಶದ ಜನರಿಗೆ ಅಂತಿಮವಾಗಿ ಕಾನೂನು ನಮ್ಮನ್ನು ಕಾಪಾಡಲಿದೆ ಎಂಬ ಅಂಶ ತಿಳಿದಿದೆ ಎಂದರು.
ಇದೇ ವೇಳೆ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಾದ ಚರ್ಚಾಸ್ಪರ್ಧೆ, ಪ್ರಬಂಧ ಸ್ಪರ್ಧೆ, ಮಾದರಿ ನ್ಯಾಯಾಲಯ ಸ್ಪರ್ಧೆ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷ ಡಾ. ಎಂ.ಪಿ. ಶ್ಯಾಮ್, ಕಾಲೇಜಿನ ಪ್ರಾಂಶುಪಾಲ ಪ್ರೊ. ಅಂಜಿನ ರೆಡ್ಡಿ ಕೆ.ಆರ್. ಉಪಸ್ಥಿತರಿದ್ದರು.