

ತಿಪಟೂರು: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಲೋಕಾಯುಕ್ತ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಬೆರಳೆಣಿಕೆಯಷ್ಟಿದ್ದ ಸಾರ್ವಜನಿಕರನ್ನು ಕಂಡು ಅಧಿಕಾರಿಗಳ ವಿರುದ್ಧ ಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಶೇ.62ಕ್ಕೂ ಹೆಚ್ಚು ಹೆರಿಗೆ ಸಿಸೇರಿಯನ್ ಆಗುತ್ತಿರುವುದು ಮತ್ತು ವಿತರಣಾ ಕೇಂದ್ರ ತಲುಪುವ ಮುಂಚೆ ಬಿಸಿಯೂಟದ ಅಕ್ಕಿ ತೂಕ ಕಳೆದುಕೊಳ್ಳುತ್ತಿರುವುದಕ್ಕೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಲೋಕಾಯುಕ್ತರು, ತಾಲೂಕಿನಲ್ಲಿ 11 ಪಿಎಚ್‌ಸಿ ಕೇಂದ್ರಗಳಿದ್ದು, ತಲಾ ಮೂವರು ಸ್ಟಾಫ್ ನರ್ಸ್‌ಗಳು ಮತ್ತು ಒಬ್ಬ ಮೆಡಿಕಲ್ ಆಫಿಸರ್ ಇದ್ದಾರೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿಗಳಿಂದ ಬಂದಾಗ, ಜಿಲ್ಲೆಯಲ್ಲಿ ಶೇ.62ಕ್ಕೂ ಹೆಚ್ಚು ಹೆರಿಗೆಗಳು ಸಿಸೇರಿಯನ್ ಮೂಲಕ ಆಗುತ್ತಿರುವುದು ಇಡೀ ದೇಶದ ಗಮನ ಸೆಳೆದಿದೆ. ಮೊದಲು ಈ ಸಂಖ್ಯೆಯನ್ನು ಇಳಿಸಿ ಜಿಲ್ಲೆಯ ಮಾನ ಉಳಿಸಿ ಎಂದರು.
ಫೆ.19ರಂದು ವಿಜಯವಾಣಿಯಲ್ಲಿ ಪ್ರಕಟವಾಗಿದ್ದ ‘ಶಿಕ್ಷಣ ಸಚಿವರ ತವರಲ್ಲಿ ಅಕ್ಕಿ ಬಿಕ್ಕಟ್ಟು’ ಬಗ್ಗೆ ಪರೋಕ್ಷವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಿವಿಹಿಂಡಿದ ಲೋಕಾಯುಕ್ತರು, ಪತ್ರಿಕೆ ವರದಿ ಮಾಡುವವರೆಗೂ ನೀವೇನು ಮಾಡುತ್ತಿದ್ದಿರಿ. ಟಿಎಪಿಸಿಎಂಎಸ್‌ನಿಂದ ಹೊರಟ ಬಿಸಿ ಊಟದ ಅಕ್ಕಿ ವಿತರಣಾ ಕೇಂದ್ರ ತಲುಪುವಷ್ಟರೊಳಗೆ ತೂಕ ಕಳೆದುಕೊಂಡಿರುತ್ತೆ. ಸರ್ಕಾರಿ ಸಲವತ್ತು ಸಮರ್ಪಕವಾಗಿ ಹಂಚಿಕೆ ಆಗದಿರುವುದರ ಹಿಂದೆ ಇರುವ ಶಕ್ತಿಗಳ ನಮಗೆ ಗೊತ್ತು. ಇಂತವರ ವಿರುದ್ಧ ಕೂಡಲೇ ದೂರು ದಾಖಲಿಸಿ ಎಂದರು.
ಅನಧಿಕೃತವೆಂದ ಮೇಲೆ ಅಭಿವೃದ್ಧಿ ಶುಲ್ಕವೇಕೆ ? 2016ರ ಜೂನ್‌ನಲ್ಲಿ ಖಾತೆ ವಿಚಾರವಾಗಿ ಲೋಕಾಯುಕ್ತಕ್ಕೆ ದೂರು ದಾಖಲಾದ ನಂತರದ ಬೆಳವಣಿಗೆಗಳಿಂದ ಟೂಡಾ ಅನುಮೋದನೆ ಪಡೆಯದ ಸ್ವತ್ತುಗಳನ್ನು ಅನಧಿಕೃತ ಎಂದು ಘೋಷಿಸುತ್ತೀರಿ, ಹಾಗಿದ್ದರೆ ಇಂತಹ ಎಷ್ಟು ಅನಧಿಕೃತ ಬಡಾವಣೆಗಳು ನಗರದಲ್ಲಿವೆ ಎಂಬ ಲೋಕಾಯುಕ್ತರ ಪ್ರಶ್ನೆಗೆ ನಗರಾಯುಕ್ತರಿಂದ ಉತ್ತರವಿರಲಿಲ್ಲ. ಅನಧಿಕೃತ ಎಂದು ಘೋಷಿಸಿದ ನಂತರವೂ ಅಭಿವೃದ್ಧಿ ಶುಲ್ಕ ಪಡೆದು, ನಂತರ ಬಡಾವಣೆಗೆ ನೀರು, ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲವೇಕೆ ಎಂಬ ಪ್ರಶ್ನೆಗೂ ಅಧಿಕಾರಿಗಳಿಂದ ಸೂಕ್ತ ಉತ್ತರವಿರಲಿಲ್ಲ. ಕಡೆಗೆ 2022ರ ಅಕ್ಟೋಬರ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಎಂ.ಎನ್.ನಾಗರಾಜು ಅರ್ಜಿಗೆ ಸೂಕ್ತ ಉತ್ತರ ಕೊಡಿ ಎಂದು ಸೂಚಿಸಿದ ನಂತರವೂ ಅವರಿಗೆ ಉತ್ತರಿಸದಿರುವ ಬಗ್ಗೆಯೂ ಸೂಕ್ತ ಸಮಜಾಯಿಷಿ ಬರಲಿಲ್ಲ.
ಆರೋಗ್ಯ ಸುಧಾರಣೆಗೆ ಆದ್ಯತೆ ಕೊಡಿ: ತಾಲೂಕಿನಲ್ಲಿ 355 ಅಂಗನವಾಡಿ ಕೇಂದ್ರಗಳಿದ್ದು, 14 ಕೇಂದ್ರಗಳು ಖಾಸಗಿಯವು. 12 ಮೇಲ್ವಿಚಾರಕರ ಪೈಕಿ 8 ಮಂದಿ ಇದ್ದಾರೆ. 12 ವೃತ್ತಗಳನ್ನು ರಚಿಸಿ ಸೂಕ್ತವಾಗಿ ಕಾರ‌್ಯ ವಿಂಗಡಣೆ ಮಾಡಲಾಗಿದೆ. ಶಾಶಕರ ಆಯ್ಕೆ ಪಟ್ಟಿ ಅನ್ವಯ 9 ಮಂದಿಯನ್ನು ಉದ್ಯೋಗಿನಿ ಯೋಜನೆಗೆ ಆಯ್ಕೆ ಮಾಡಲಾಗಿದೆ. 2022 ರಲ್ಲಿ 15ನೇ ಹಣಕಾಸು ಯೋಜನೆಯಡಿ ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಬಿಡುಗಡೆಯಗಿರುವ 17 ಲಕ್ಷ ಹಣದಲ್ಲಿ ಮೂರು ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ ಎಂದು ನೂತನ ಸಿಡಿಪಿಒ ಮಾಹಿತಿ ನೀಡಿದರು. ಈ ಮಧ್ಯೆ ಮಾತನಾಡಿದ ಲೋಕಾಯುಕ್ತರು, ತಾಲೂಕಿನಲ್ಲಿರುವ 9 ಅಪೌಷ್ಟಿಕ ಮಕ್ಕಳ ಆರೋಗ್ಯ ಸುಧಾರಣೆಗೆ ಆದ್ಯತೆ ಕೊಡಿ ಎಂದರು.
ನಗರದ ವಿವೇಕಾನಂದ ನಗರದ 5 ನೇ ಕ್ರಾಸ್‌ನಲ್ಲಿ ಮನೆ, ಮತ್ತು ಅಂಗಡಿಯಲ್ಲಿ 24 ಗಂಟೆ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರು ಮತ್ತು ನಿವಾಸಿಗಳಿಗೆ ತೊಂದರೆ ಆಗಿದೆ, ಆದರೆ ಜನರ ಪ್ರಶ್ನೆಗೆ ಉತ್ತರಿಸಬೇಕಿದ್ದ ನಗರಠಾಣೆ ಅಧಿಕಾರಿಗಳಾಗಲಿ, ಅಬಕಾರಿ ಅಧಿಕಾರಿಗಳಾಗಲೀ ಸಭೆಗೆ ಬಂದಿರಲಿಲ್ಲ.
ಬಹುಷಃ ತಾಪಂಗೆ ಸಾರ್ವಜನಿಕರ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇಲ್ಲದಂತೆ ತೋರುತ್ತೆ. ಪ್ರಚಾರದ ಕೊರತೆಯಿಂದ ಸಾರ್ವಜನಿಕರು ಸಭೆಗೆ ಬಾರದಿರಲು ನಿಮ್ಮ ಬೇಜವಾಬ್ದಾರಿಯೇ ಕಾರಣ, ನಿಮ್ಮ ಉದಾಸೀನಕ್ಕೆ ಕಾರಣ ಹುಡುಕಲು ಹೊರಟರೆ ಪರಿಸ್ಥಿತಿ ಬೇರೆ ರೀತಿ ಆಗಲಿದೆ. ಇನ್ನು ಮುಂದಾದರೂ ಎಚ್ಚೆತ್ತುಕೊಂಡು, ಜನರ ತೆರಿಗೆ ಹಣದ ಸಂಬಳ ಪಡೆಯುವ ನೀವುಗಳು ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಿ. | ಕೆ.ರಾಮರೆಡ್ಡಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ತಾಲೂಕು ಮಟ್ಟದಲ್ಲಿ ಸಭೆಯ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡದೆ, ನಿರ್ಲಕ್ಷ್ಯ ತೋರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಕುಂದುಕೊರತೆ ಸಭೆ ಆಯೋಜಿಸುವ ಬಗ್ಗೆ ಚಿಂತಿಸಲಾಗುವುದು. | ವಲಿಬಾಷಾ ಜಿಲ್ಲಾ ಲೋಕಾಯುಕ್ತ ಅಧೀಕ್ಷಕ