

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಮೈಕ್ರೋ ಫೈನಾನ್ಸ್ ದಂಧೆ ಮಿತಿಮೀರಿದ್ದು, ಜನರು ಹೈರಾಣಾಗಿದ್ದಾರೆ. ಹಿಂದೆಲ್ಲ ಸಾಲಗಾರರನ್ನು ಜೀತದಾಳುವಂತೆ ಕಂಡು ಶೋಷಿಸಲಾಗುತ್ತಿತ್ತು. ಇಂದಿನ ಆಧುನಿಕ ದಿನಗಳಲ್ಲಿ ಇದೇ ರೀತಿಯ ವರ್ತನೆ ಮರುಕಳಿಸುತ್ತಿರುವುದು ಅಮಾನವೀಯ. ಸಾಲ ನೀಡಿದ ಮೈಕ್ರೋ ಫೈನಾನ್ಸ್ ಕಂಪನಿಗಳು ಮತ್ತು ಕೆಲವೆಡೆ ಇತ್ತೀಚೆಗೆ ಹುಟ್ಟಿಕೊಂಡಿರುವ ಸ್ವಸಹಾಯ ಸಂಘಗಳು ಮನಸೋಇಚ್ಛೆ ವರ್ತಿಸುತ್ತಿವೆ.
ವೃದ್ಧರು, ಮಕ್ಕಳು, ಗರ್ಭಿಣಿಯರು, ಅಸಹಾಯಕರು ಎಂದು ನೋಡದೆ ಅವರನ್ನು ಬೀದಿಪಾಲು ಮಾಡಲಾಗುತ್ತಿದ್ದು, ಸ್ಥಳೀಯ ಆಡಳಿತ ಕಣ್ಮುಚ್ಚಿ ಕುಳಿತಿದೆ. ಸಾಲ ವಸೂಲಿಗೆ ನಿರ್ದಿಷ್ಟ ನಿಯಮಗಳಿವೆ, ಕಾನೂನಿದೆ. ಆದರೆ, ಅದನ್ನು ಗಾಳಿಗೆ ತೂರಿ, ಜನರನ್ನು ಬೆದರಿಸುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಸಾಲ ವಸೂಲಿದಾರರ ಕಾಟಕ್ಕೆ ಬೇಸತ್ತು ನೂರಾರು ಜನರು ಊರನ್ನೇ ತೊರೆದ ಪ್ರಕರಣ ರಾಮನಗರ ಜಿಲ್ಲೆಯ ಕೂನಮುದ್ದನಹಳ್ಳಿಯಲ್ಲಿ ಸಂಭವಿಸಿದೆ.
ವಾರದ ಲೆಕ್ಕದಲ್ಲಿ ಸಾಲ ಮರುಪಾವತಿ ಮಾಡಿಕೊಳ್ಳುತ್ತಿದ್ದು, ಶೇಕಡ 22ರಿಂದ 28ರಷ್ಟು ಬಡ್ಡಿದರವನ್ನು ವಸೂಲಿ ಮಾಡುತ್ತಿವೆ. ಆರ್ಥಿಕ ಸಂಕಷ್ಟ, ಕೂಲಿ ಸಿಗದೆ ಇರುವುದು ಮುಂತಾದ ಕಾರಣದಿಂದ ಸಾಲ ತೀರಿಸಲಾಗದೆ ಗ್ರಾಮೀಣಿಗರು ಚಿಂತಾಕ್ರಾಂತರಾಗಿದ್ದಾರೆ. ಬೇರೆ ದಾರಿ ಕಾಣದೆ ರಾತ್ರೋರಾತ್ರಿ ಮನೆ-ಊರು ಬಿಟ್ಟು ತೆರಳಿದ್ದಾರೆ.
ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂತ್ರಸ್ತರಾಗಿದ್ದು, ಮಾನವ ಹಕ್ಕುಗಳ ಸಂಘಟನೆಗಳು ಇವರ ನೆರವಿಗೆ ಬರಬೇಕಿದೆ. ರಾಮನಗರ ಜಿಲ್ಲೆಯೊಂದರಲ್ಲೇ 30ಕ್ಕೂ ಹೆಚ್ಚು ಮೈಕ್ರೋಫೈನಾನ್ಸ್ ಕಂಪನಿಗಳು ಸಾಲ ನೀಡುತ್ತಿದ್ದು, ವಸೂಲಾತಿ ಹೆಸರಲ್ಲಿ ಕಿರುಕುಳ ನೀಡಲಾರಂಭಿಸಿವೆ. ಆದರೆ, ಇದು ಒಂದು ಜಿಲ್ಲೆಗೆ ಸೀಮಿತವಾದ ಸಮಸ್ಯೆಯಾಗಿ ಉಳಿದಿಲ್ಲ. ಇತ್ತೀಚೆಗೆ ಬೆಳಗಾವಿಯ ಯಮನಾಪುರದಲ್ಲಿ ಏಳು ಸಾವಿರಕ್ಕೂ ಹೆಚ್ಚು ಸಂತ್ರಸ್ತ ಮಹಿಳೆಯರು ತಮಗೆ 19 ಕೋಟಿ ರೂ.ಗೂ ಅಧಿಕ ವಂಚನೆಯಾಗಿರುವುದರ ಕುರಿತು ನಾಲ್ವರ ವಿರುದ್ಧ ದೂರು ದಾಖಲಿಸಿರುವುದು ಇದಕ್ಕೆ ನಿದರ್ಶನ.
ರಾಜ್ಯದ ಎಲ್ಲ ಕಡೆಗೂ ಮೈಕ್ರೋ ಫೈನಾನ್ಸ್ ಕಾಟ ಹೆಚ್ಚಿದೆ. ಜನರಿಗೆ ಸಾಲ ಕೊಟ್ಟು ದುಬಾರಿ ಬಡ್ಡಿ ವಸೂಲಿಗೆ ಹಿಂಸಿಸಲಾಗುತ್ತಿದೆ. ದಂಧೆಕೋರರ ಜತೆ ಕೆಲ ಪೊಲೀಸರೂ ಕೈಜೋಡಿಸಿದ್ದು, ಪರಿಸ್ಥಿತಿಯನ್ನು ಬಿಗಡಾಯಿಸಿದೆ. ಇಲ್ಲಿ ಇನ್ನೊಂದು ಆಯಾಮವೂ ಇದೆ. ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಪ್ರತಿಷ್ಠಿತ ಖಾಸಗಿ ಬ್ಯಾಂಕುಗಳು ಬಡವರಿಗೆ, ಕೂಲಿಕಾರ್ವಿುಕರಿಗೆ ಸಮರ್ಪಕವಾಗಿ ಸಾಲ ಒದಗಿಸುವುದಿಲ್ಲ.
ಹೀಗಾಗಿ ಜೀವನ ಸಾಗಿಸುವ ಅನಿವಾರ್ಯತೆಗಾಗಿ ಸಾಲ ಪಡೆಯುವ ಬಡವರು ಮೈಕ್ರೋಫೈನಾನ್ಸ್ ಗಳ ನಿಯಮ ಅರಿಯದೆ ದುಬಾರಿ ಬಡ್ಡಿದರದ ಸುಳಿಗೆ ಸಿಲುಕುತ್ತಾರೆ. ಇದರಿಂದ ಹೊರಬರಲು ಆಗದೆ, ಸಾಲ ತೀರಿಸಲು ಆಗದೆ ಪರದಾಡುತ್ತಾರೆ. ಹಾಗಾಗಿ, ರಾಷ್ಟ್ರೀಕೃತ ಬ್ಯಾಂಕುಗಳು ಗ್ರಾಮೀಣ ಪ್ರದೇಶದವರಿಗೆ, ಅದರಲ್ಲೂ ಆರ್ಥಿಕವಾಗಿ ದುರ್ಬಲವಾಗಿ ಇರುವವರಿಗೆ ಯೋಗ್ಯ ಬಡ್ಡಿದರದಲ್ಲಿ ಸಾಲ ನೀಡುವಂಥ ಕಿರಿಯೋಜನೆಗಳನ್ನು ರೂಪಿಸುವುದು ಅಗತ್ಯ. ಅಲ್ಲದೆ, ಬ್ಯಾಂಕ್ ಮತ್ತು ಸಾಲ ಕೊಡುವ ಸಂಘಸಂಸ್ಥೆಗಳಿಗೆ ಸರ್ಕಾರ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು ಮತ್ತು ಸಾಲ ವಸೂಲಾತಿ ಹೆಸರಿನಲ್ಲಿ ದೌರ್ಜನ್ಯ ಎಸಗುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.