ಅಜೀರ್ಣ ಸ್ವಭಾವ ದೂರವಿರಿಸಿ

untitled-design-1-6892415298fdd
Published on
ಸಾಧನೆ ಎಂದರೆ ನಮ್ಮ ಮನಸಿಗೆ ಆಗದು. ಆದ್ದರಿಂದ ಸಾಧನೆಗೆ ಕುಳಿ ತಾಗ, ಇಲ್ಲಾ ಸಾಧನೆ ಮಾಡುವ ಸಂಕಲ್ಪ ಮಾಡಿದಾಗಲೆಲ್ಲಾ ಏನಾದರೂ ನೆಪವೊಡ್ಡಿ ಅದರಿಂದ ದೂರವಾಗಲು ಮನಸ್ಸು ಬಯಸುತ್ತದೆ. ಯಾವಾಗ ಸಾಧನೆಯಿಂದ ದೂರವಾಗಲು ಸಾಧ್ಯವಿಲ್ಲವೋ ಆಗ ನಮಗೆ ಕೋಪ ಬರುತ್ತದೆ. ನಾವದನ್ನು ಎದುರಿರುವ ವ್ಯಕ್ತಿಯ ಮೇಲೆ ವ್ಯಕ್ತಪಡಿಸುತ್ತೇವೆ.

ಆಗ ಆ ವ್ಯಕ್ತಿಗೂ ಸಿಟ್ಟು ಬರುತ್ತದೆ. ಇದು ಹೀಗೆಯೇ ಸರಪಳಿಯಂತೆ ಬೆಳೆಯುತ್ತಾ ಹೋಗುತ್ತದೆ. ನಿಜವಾದ ತಪಸ್ಸು ನಮ್ಮನ್ನು ಪ್ರಶಾಂತತೆಯ ಕಡೆಗೆ ಕರೆದೊಯ್ಯಬೇಕು. ಆದರೆ ಅದು ನಮ್ಮನ್ನು ನರಕಕೂಪದ ಕಡೆ ಕರೆದೊಯ್ಯುತ್ತಿದೆ. ಅದನ್ನೇ ಸುಭಾಷಿತಕಾರ ಅಜೀರ್ಣ ಎಂಬ ಶಬ್ದದಿಂದ ಉಲ್ಲೇಖಿಸಿದ್ದಾನೆ. ಸಾಕಷ್ಟು ಸಾಧನೆ ಮಾಡಿದ ಮೇಲೂ ಸಣ್ಣ ಸಣ್ಣ ವಿಷಯಗಳಿಗೆ ನಾವು ನಮ್ಮ ಮನಸಿನ ಶಾಂತತೆಯನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದರೆ ನಮ್ಮ ತಪಸ್ಸು ಅಜೀರ್ಣವಾಗಿದೆ ಎಂದೇ ಅರ್ಥ. ಕೋಪವೊಂದಿದ್ದರೆ ಸಾಕು, ತಪಸ್ಸನ್ನು ನಾಶಪಡಿಸಲು ಇನ್ನಾವ ಪರಿಕರವೂ ಬೇಡ; ಯಾವ ವ್ಯಕ್ತಿಯೂ ಬೇಡ. ಆದ್ದರಿಂದ ತಪಸ್ವಿಯು ಎಂದೆಂದೂ ಕೋಪದ ವಶವರ್ತಿಯಾಗಬಾರದು.ಅಹಂಕಾರವನ್ನು ನಾಶ ಮಾಡುವ ಸಾಮರ್ಥ್ಯವಿರುವುದು ಜ್ಞಾನಕ್ಕೆ ಮಾತ್ರ.

ಯಾವಾಗ ಅಹಂಕಾರ ನಾಶವಾಯಿತೋ ಅದೇ ಮುಕ್ತಿ. ಜ್ಞಾನಿಯಾದವನಿಗೆ ವಿನಯ ಅಲಂಕಾರವೇ ಹೊರತು ಅಹಂಕಾರವಲ್ಲ. ಆದ್ದರಿಂದ ಜ್ಞಾನಿಯು ಅಹಂಕಾರದಿಂದ ದೂರವಿರಬೇಕು. ಹೆಚ್ಚಿನ ಮನುಷ್ಯರಲ್ಲಿರುವ ಸಾಮಾನ್ಯ ಸ್ವಭಾವವೆಂದರೆ ಅವರಿವರನ್ನು ಆಡಿಕೊಳ್ಳುವುದು. ತಾನೊಬ್ಬ ಮಾತ್ರ ಸರಿ. ತಾನು ಮಾಡುವುದೆಲ್ಲ ನ್ಯಾಯ ಸಮ್ಮತವಾದುದು. ಇತರರು ಮಾಡುವುದೆಲ್ಲ ತಪ್ಪು ಮತ್ತು ಅನ್ಯಾಯ ಎಂದುಕೊಳ್ಳುತ್ತಾರೆ. ಇದು ಕೆಟ್ಟ ಅಭ್ಯಾಸ. ಹೀಗೆ ಎಲ್ಲ ವಸ್ತುವಿಗೂ, ಸ್ವಭಾವಕ್ಕೂ ಅಜೀರ್ಣ ರೂಪವಾದ ಕೆಲವು ಅಂಶಗಳಿರುತ್ತವೆ.

ವಿದ್ಯಾರ್ಥಿಗೆ ಅತಿಯಾದ ನಿದ್ದೆ ಅಜೀರ್ಣ, ಸಾಧಕನಿಗೆ ಆಲಸ್ಯ ಅಜೀರ್ಣ, ಮಾತುಗಾರನಿಗೆ ಓದದಿರುವುದು ಅಜೀರ್ಣ, ಕ್ರೀಡಾಪಟುವಿಗೆ ಅಭ್ಯಾಸ ಮಾಡದಿರುವುದು ಅಜೀರ್ಣ. ಯಾವುದೆಲ್ಲ ಬೆಳವಣಿಗೆಗೆ ಮಾರಕವೋ ಅದೆಲ್ಲವೂ ಅಜೀರ್ಣವೇ. ಆದ್ದರಿಂದ ಅಜೀರ್ಣವಾಗುವ ಸ್ವಭಾವವನ್ನು ದೂರವಿರಿಸಿ ಬದುಕುವ ವಿಧಾನವನ್ನು ರೂಢಿಸಿಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net