ಅಡಕೆ ಬೆಳೆಗಾರರಿಗೆ ಆಗುತ್ತಿರುವ ಶೋಷಣೆ ತಪ್ಪಿಸಿ

benne praveen
ಬೆಣ್ಣೆ ಪ್ರವೀಣ್
Published on

ಶಿವಮೊಗ್ಗ: ಜಿಲ್ಲೆಯಲ್ಲಿ ಖೇಣಿದಾರರಿಂದ ಅಡಕೆ ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಮತ್ತು ಹೊರ ಊರಿನ ಖೇಣಿದಾರರು ತಾಲೂಕಿಗೆ ಬಂದು ಖರೀದಿ ಮಾಡಲು ಸೂಕ್ತ ಭದ್ರತೆ ನೀಡಬೇಕು ಎಂದು ಶಿಕಾರಿಪುರ ಅಡಕೆ ಬೆಳೆಗಾರರ ಹಿತರಕ್ಷಣಾ ವೇದಿಕೆಯ ಪ್ರಮುಖ ಬೆಣ್ಣೆ ಪ್ರವೀಣ್ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಅಡಕೆ ಖೇಣಿದಾರರು ರೈತರ ಮೇಲೆ ತೀವ್ರ ಶೋಷಣೆ ಮಾಡುತ್ತಿದ್ದಾರೆ. ತಾವು ನಿಗದಿ ಮಾಡಿದ ಬೆಲೆಗೆ ರೈತರು ಅಡಕೆ ನೀಡಬೇಕು. 10 ವರ್ಷದೊಳಗಿನ ತೋಟದ ಒಂದು ಕ್ವಿಂಟಾಲ್ ಹಸಿ ಅಡಕೆಗೆ 10 ಕೆ.ಜಿ. ರಾಶಿ ಅಡಕೆಯನ್ನು ಮಾತ್ರ ರೈತರಿಗೆ ನೀಡಬೇಕು. 10 ವರ್ಷ ಮೇಲ್ಪಟ್ಟ ತೋಟದವರಿಗೆ ಕ್ವಿಂಟಾಲ್‌ವೊಂದಕ್ಕೆ 11 ಕೆ.ಜಿ. ರಾಶಿ ಅಡಕೆ ಕೊಡುವ ನಿಯಮ ಮಾಡಿಕೊಂಡಿದ್ದಾರೆ. ಈ ರೀತಿ ಹಲವು ನಿಯಮ ತಂದು ಶೋಷಣೆ ಮಾಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಶಿಕಾರಿಪುರ ತಾಲೂಕಿನ ಅಡಕೆ ಖೇಣಿದಾರರನ್ನು ಹೊರತುಪಡಿಸಿ ಹೊರ ಊರಿನವರು ತಾಲೂಕಿಗೆ ಬರಬಾರದು ಎನ್ನುವ ನಿಟ್ಟಿನಲ್ಲಿ ತಾಲೂಕಿನ ಖೇಣಿದಾರರೆಲ್ಲ ಸೇರಿಕೊಂಡು ಖೇಣಿದಾರರ ಸಹಕಾರ ಸಂಘ ರಚಿಸಿಕೊಂಡಿದ್ದಾರೆ. ಆ ಸಂಘದ ಮೂಲಕ 10 ನಿಯಮ ಮುಂದಿಟ್ಟುಕೊಂಡು ಕರಪತ್ರ ಮುದ್ರಿಸಿ ತಾಲೂಕಿನಾದ್ಯಂತ ಹಂಚಿದ್ದಾರೆ ಎಂದು ಆರೋಪಿಸಿದರು.

ಖೇಣಿದಾರರ ಕಿರುಕುಳದ ವಿರುದ್ಧ ಈಗಾಗಲೇ ಶಿಖಾರಿಪುರ ತಹಸೀಲ್ದಾರ್ ಅವರ ಗಮನಕ್ಕೆ ತರಲಾಗಿದೆ. ಅವರು ಕೂಡ ರೈತರಿಗೆ ಕಿರುಕುಳ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಶಾಸಕ ಬಿ.ವೈ.ವಿಜಯೇಂದ್ರ ಹಾಗೂ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಗಮನಕ್ಕೂ ತರಲಾಗಿದೆ. ಅವರು ಅಡಕೆ ಬೆಳೆಗಾರರ ಪರವಾಗಿ ಇರುವುದಾಗಿ ಹೇಳಿದ್ದಾರೆ. ರೈತರಿಗೆ ಯಾರೇ ತೊಂದರೆ ಕೊಟ್ಟರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ ಎಂದರು. ಅಡಕೆ ಬೆಳೆಗಾರರಾದ ಮಹಾಲಿಂಗಪ್ಪ, ಮಂಜುನಾಥ್, ಸಂದೀಪ್ ಅಂಬಾರಗೊಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net