VIDEO| ಅಭಿ-ಅವಿವಾ ನಿಶ್ಚಿತಾರ್ಥ ಸಂಭ್ರಮದ ಮನಸೆಳೆಯುವ ದೃಶ್ಯ ಇಲ್ಲಿದೆ…

Abhishek
Published on

ಬೆಂಗಳೂರು: ನಟ ಅಭಿಷೇಕ್​ ಅಂಬರೀಶ್​ ಮತ್ತು ಮಾಡೆಲ್​ ಅವಿವಾ ಬಿದ್ದಪ್ಪ ಅವರ ನಿಶ್ಚಿತಾರ್ಥದ ವಿಡಿಯೋ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

ಕಳೆದ ಭಾನುವಾರ (ಡಿ11) ಬೆಳಗ್ಗೆ 9.30ಕ್ಕೆ ಆರ್ ಟಿ ನಗರದ ಫೋರ್ ಸೀಸನ್ಸ್ ಹೋಟೆಲ್​ನಲ್ಲಿ ಎರಡೂ ಕುಟುಂಬದ ಸಮ್ಮುಖದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಸಮಾರಂಭ ನೆರವೇರಿತು. ಕಾರ್ಯಕ್ರಮದಲ್ಲಿ ನಟ ದರ್ಶನ್​, ನಟ ಯಶ್, ಪತ್ನಿ ರಾಧಿಕಾ ಪಂಡಿತ್​, ಸಚಿವ ಅಶ್ವಥ್ ನಾರಾಯಣ್ ಸೇರಿದಂತೆ ಚಿತ್ರರಂಗ ಹಾಗೂ ರಾಜಕೀಯ ಗಣ್ಯರ ದಂಡು ಆಗಮಿಸಿ, ನವಜೋಡಿಗೆ ಶುಭ ಹಾರೈಸಿದ್ದರು.

ಇದೀಗ ಇಡೀ ಸಮಾರಂಭದ ವಿಡಿಯೋವನ್ನು ವೆಡ್ಡಿಂಗ್​ ಜರ್ನಲ್​ ಆಫ್​ ಇಂಡಿಯಾ ಸಂಸ್ಥೆ ಸೊಗಸಾಗಿ ಸೆರೆಹಿಡಿದಿದ್ದು, ಕಂಪನಿಯ ಸಿಇಒ ಹಾಗೂ ಫೋಟೋ ಜರ್ನಲಿಸ್ಟ್​ ಜಯರಾಮನ್​ ಪಿಳ್ಳೈ ಅವರು ತಮ್ಮ ಯೂಟ್ಯೂಬ್​ನಲ್ಲಿ ನಿಶ್ಚಿತಾರ್ಥದ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಅಭಿ ಮತ್ತು ಅವಿವಾ ವಿವಿಧ ಉಲ್ಲಾಸದ ಕ್ಷಣಗಳನ್ನು ಸೆರೆಹಿಡಿಯಲಾಗಿದೆ.

ಇನ್ನು ಅಭಿ ಕೈಹಿಡಿಯಲಿರುವ ಅವಿವಾ ಬಿದ್ದಪ್ಪ, ಫ್ಯಾಷನ್​ ಲೋಕದ ಖ್ಯಾತ ನಾಮ ಪ್ರಸಾದ್​ ಬಿದ್ದಪ್ಪ ಅವರು ಮಗಳು. ಅವಿವಾ ಮತ್ತು ಅಭಿ ನಾಲ್ಕು ವರ್ಷಗಳಿಂದ ಲವ್​ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಇಬ್ಬರು ಪ್ರೀತಿಗೆ ಎರಡೂ ಕುಟುಂಬದಲ್ಲಿ ಗ್ರೀನ್​ ಸಿಗ್ನಲ್​ ಸಿಕ್ಕ ಬಳಿಕ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಇಬ್ಬರ ಮದುವೆ ನಡೆಯಲಿದೆ.

ನಿಶ್ಚಿತಾರ್ಥ ಆಗುವವರೆಗೂ ಹುಡುಗಿ ಯಾರು ಎಂಬುದು ಯಾರಿಗೂ ತಿಳಿಯದಂತೆ ರಹಸ್ಯ ಕಾಪಾಡುವ ಪ್ರಯತ್ನ ಮಾಡಿದ್ದರು. ಆದರೆ, ರಹಸ್ಯ ಹೆಚ್ಚು ದಿನ ಉಳಿಯಲಿಲ್ಲ. ಬಹಳ ಹಿಂದೆಯೇ ಅವಿವಾ ಬಿದ್ದಪ್ಪ ಹೆಸರು ಮಾಧ್ಯಮಗಳಲ್ಲಿ ಹರಿದಾಡಿತು. ಸದ್ಯ ಅಭಿಷೇಕ್​ ಕಾಳಿ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಸದ್ಯದಲ್ಲಿ ಹಸೆಮಣೆ ಏರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net