ಅವತಾರ್​-2 ಸಿನಿಮಾ ಎಫೆಕ್ಟ್​: ಅಪಾಯಕಾರಿ ತಿಮಿಂಗಿಲ ಶಾರ್ಕ್ ಮೇಲೆ ಸವಾರಿ ಮಾಡಿದ ಭೂಪ! ವಿಡಿಯೋ ವೈರಲ್​​

Avatar
Published on

ನವದೆಹಲಿ: ಇತ್ತೀಚೆಗಷ್ಟೇ ಬಿಡುಗಡೆಯಾದ ಜೇಮ್ಸ್​ ಕ್ಯಾಮರೂನ್​ ನಿರ್ದೇಶನ ಹಾಗೂ ನಿರ್ಮಾಣದ ಅವತಾರ್ ದಿ ವೇ ಆಫ್ ವಾಟರ್ ಸಿನಿಮಾ ಬಾಕ್ಸ್​​ಆಫೀಸ್​ನಲ್ಲಿ ಕಮಾಲ್​ ಮಾಡಿದೆ. ಭಾರತದಲ್ಲೂ ಈ ಸಿನಿಮಾ ದಾಖಲೆ ಗಳಿಕೆ ಮಾಡಿದ್ದು, ಬಿಡುಗಡೆಯಾದ ಮೂರೇ ದಿನದಲ್ಲಿ 100 ಕೋಟಿ ರೂ. ಕ್ಲಬ್​​ ದಾಳಿ 200 ಕೋಟಿ ರೂ. ಕ್ಲಬ್​ ಸೇರುವ ಅಂಚಿಗೆ ಬಂದಿದೆ.

ಅವತಾರ್​ ಸಿನಿಮಾ ದೃಶ್ಯ ವೈಭವ ಮತ್ತು ಸಾಹಸಗಳನ್ನು ನೋಡಿ ವೀಕ್ಷಕರು ಮಂತ್ರಮುಗ್ಧರಾಗಿದ್ದಾರೆ. ಅವಾತರ್​ ಸಿನಿಮಾದ ಕ್ರೇಜ್​ ಹೆಚ್ಚಾಗಿದ್ದು, ಇದರಿಂದ ಪ್ರಭಾವಿತನಾದ ವ್ಯಕ್ತಿಯೊಬ್ಬ ಸಮುದ್ರದಲ್ಲಿ ತಿಮಿಂಗಿಲ ಶಾರ್ಕ್​ ಏರಿ ಸವಾರಿ ಮಾಡುವ ಮೂಲಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅವತಾರ್​ ಸಿನಿಮಾದಲ್ಲಿ ತಿಮಿಂಗಿಲ ಮತ್ತು ತೊರುಕು ( ಡ್ರಾಗನ್​ ರೀತಿಯ ಪ್ರಾಣಿ) ಜೀವಿಯ ಮೇಲೆ ಸವಾರಿ ಮಾಡುವ ಚಿತ್ರದ ಪ್ರಮುಖ ಪಾತ್ರಧಾರಿಯಿಂದ ವ್ಯಕ್ತಿ ಪ್ರಭಾವಿತಗೊಂಡು ತಿಮಿಂಗಿಲ ಶಾರ್ಕ್​ ಮೇಲೆ ಸವಾರಿ ಮಾಡಿರುವಂತೆ ಕಾಣುತ್ತದೆ.

ವೈರಲ್​ ವಿಡಿಯೋ ನೋಡುವುದಾದರೆ, ಅರಬ್​ ಮೂಲದ ವ್ಯಕ್ತಿಗಳು ಸಮುದ್ರದ ಮಧ್ಯದಲ್ಲಿ ವಿಹಾರ ನೌಕೆಯಲ್ಲಿದ್ದಾರೆ. ಅವರಲ್ಲಿ ಒಬ್ಬರು ತಿಮಿಂಗಿಲ ಶಾರ್ಕ್ ಮೇಲೆ ಏರಿ ಆಳವಾದ ಸಮುದ್ರಕ್ಕೆ ಸವಾರಿ ಮಾಡುವಾಗ ಆತನ ಸ್ನೇಹಿತರ ಗುಂಪು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋವನ್ನು ಪ್ರಖ್ಯಾತ ಮೀಮ್ಸ್​ ಇನ್​ಸ್ಟಾಗ್ರಾಂ ಹ್ಯಾಂಡಲ್ laughtercolours ನಲ್ಲಿ ಶೇರ್​ ಮಾಡಲಾಗಿದ್ದು, ಅವತಾರ್​ 2 ನೋಡಿದ ಬಳಿಕ ನಾನು ಎಂಬ ಅಡಿಬರಹ ನೀಡಲಾಗಿದೆ.

ಡ್ಯಾಡಿ ಪರೋಡಿ ಹೆಸರಿನ ಟ್ವಿಟರ್​ ಖಾತೆಯಲ್ಲೂ ವಿಡಿಯೋ ಪೋಸ್ಟ್​ ಮಾಡಲಾಗಿದ್ದು, 9 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. 9 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ಲೈಕ್​ ಮಾಡಿದ್ದಾರೆ. ಸಾಕಷ್ಟು ಹಾಸ್ಯಭರಿತ ಕಾಮೆಂಟ್​ಗಳು ಹರಿದು ಬರುತ್ತಿದೆ. ಈ ವಿಡಿಯೋ ನೋಡಿ ನಿಮಗೆ ಏನನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net