ಇಂದು ಐಪಿಎಲ್​ ಮಿನಿ ಹರಾಜು: ಕಣದಲ್ಲಿದ್ದಾರೆ 405 ಆಟಗಾರರು, ಸ್ಟೋಕ್ಸ್​, ಕರನ್​, ಗ್ರೀನ್​ಗೆ ಭಾರಿ ಬೇಡಿಕೆ ನಿರೀಕ್ಷೆ

IPL Auction
Published on

ಕೊಚ್ಚಿ: ಮುಂದಿನ ವರ್ಷದ ಐಪಿಎಲ್​ 16ನೇ ಆವೃತ್ತಿಗೆ ಪೂರ್ವಭಾವಿಯಾಗಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಶುಕ್ರವಾರ ಕೇರಳದ ಕಡಲ ತೀರ ಕೊಚ್ಚಿಯಲ್ಲಿ ನಡೆಯಲಿದೆ. ಎಲ್ಲ 10 ಫ್ರಾಂಚೈಸಿಗಳ ಮಾಲೀಕರು ತಮ್ಮ ತಂಡಕ್ಕೆ ಹೆಚ್ಚಿನ ಸಮತೋಲನ ತರಬಲ್ಲ ಆಟಗಾರರ ಹುಡುಕಾಟದಲ್ಲಿದ್ದು, ವಿದೇಶಿ ಆಲ್ರೌಂಡರ್​ಗಳಾದ ಬೆನ್​ ಸ್ಟೋಕ್ಸ್​, ಸ್ಯಾಮ್​ ಕರನ್​ ಮತ್ತು ಕ್ಯಾಮರಾನ್​ ಗ್ರೀನ್​ ದೊಡ್ಡ ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆ ಇದೆ.

ಭಾರತೀಯರಲ್ಲಿ ಕನ್ನಡಿಗ ಹಾಗೂ ಪಂಜಾಬ್​ ಕಿಂಗ್ಸ್​ ತಂಡದ ಮಾಜಿ ನಾಯಕ ಮಯಾಂಕ್​ ಅಗರ್ವಾಲ್​ಗೆ ಹೆಚ್ಚಿನ ಬೇಡಿಕೆ ಬರುವ ನಿರೀಕ್ಷೆ ಇದೆ. ಇನ್ನು ದೇಶೀಯ ಆಟಗಾರರ ಪೈಕಿ, ಇತ್ತೀಚೆಗೆ ವಿಜಯ್​ ಹಜಾರೆ ಟ್ರೋಫಿಯಲ್ಲಿ ವಿಶ್ವದಾಖಲೆಯ 277 ರನ್​ ಸಿಡಿಸಿ ವಿಜೃಂಭಿಸಿರುವ ತಮಿಳುನಾಡಿನ ಜೆ. ಜಗದೀಶನ್​ಗೆ ಉತ್ತಮ ಬೇಡಿಕೆ ಬರುವ ನಿರೀಕ್ಷೆ ಇದೆ.

273 ಭಾರತೀಯರು ಮತ್ತು 132 ವಿದೇಶಿಯರ ಸಹಿತ ಒಟ್ಟು 405 ಆಟಗಾರರು ಹರಾಜು ಕಣದಲ್ಲಿದ್ದು, ಈ ಪೈಕಿ 30 ವಿದೇಶೀಯರ ಸಹಿತ ಗರಿಷ್ಠ 87 ಆಟಗಾರರಷ್ಟೇ ಮಾರಾಟವಾಗಲಿದ್ದಾರೆ. 119 ಅಂತಾರಾಷ್ಟ್ರೀಯ ಮತ್ತು 286 ದೇಶೀಯ ಆಟಗಾರರು ಅದೃಷ್ಟ ಪರಿಶೀಲಿಸಲಿದ್ದಾರೆ.

ಗಾಯದಿಂದಾಗಿ ಕಳೆದ ಐಪಿಎಲ್​ ಆವೃತ್ತಿ ತಪ್ಪಿಸಿಕೊಂಡಿದ್ದ ಇಂಗ್ಲೆಂಡ್​ನ ಯುವ ಆಲ್ರೌಂಡರ್​ ಸ್ಯಾಮ್​ ಕರನ್​ ಇತ್ತೀಚೆಗೆ ಟಿ20 ವಿಶ್ವಕಪ್​ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದು ಮಿಂಚಿದ್ದರು. ಸಿಎಸ್​ಕೆ ತಂಡ ಕರನ್​ರನ್ನು ಮರಳಿ ಸೇರಿಸಿಕೊಳ್ಳಲು ಗರಿಷ್ಠ ಪ್ರಯತ್ನ ನಡೆಸುವ ನಿರೀಕ್ಷೆ ಇದೆ. ಇನ್ನು ಆಸೀಸ್​ ಆಲ್ರೌಂಡರ್​ ಕ್ಯಾಮರಾನ್​ ಗ್ರೀನ್​ ಕೂಡ ಇತ್ತೀಚೆಗೆ ಭರ್ಜರಿ ಫಾಮ್​ರ್ನಲ್ಲಿದ್ದು, ಮೊದಲ ಬಾರಿಗೆ ಐಪಿಎಲ್​ನಲ್ಲಿ ಆಡುವ ಹಂಬಲದಲ್ಲಿದ್ದಾರೆ. ಮಾನಸಿಕ ಆರೋಗ್ಯದ ಕಾರಣ ನೀಡಿ ಕಳೆದ ಐಪಿಎಲ್​ ತಪ್ಪಿಸಿಕೊಂಡಿದ್ದ ಬೆನ್​ ಸ್ಟೋಕ್ಸ್​ ಈ ಬಾರಿ ಮರಳುತ್ತಿದ್ದಾರೆ. ಇತ್ತೀಚೆಗೆ ಪಾಕ್​ ಪ್ರವಾಸದಲ್ಲಿ ಹ್ಯಾಟ್ರಿಕ್​ ಶತಕ ಸಿಡಿಸಿ ಮಿಂಚಿದ ಇಂಗ್ಲೆಂಡ್​ ಯುವ ಬ್ಯಾಟರ್​ ಹ್ಯಾರಿ ಬ್ರೂಕ್​ ಖರೀದಿಗೂ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ. ಸನ್​ರೈಸರ್ಸ್​ನಿಂದ ಹೊರಬಿದ್ದಿರುವ ನ್ಯೂಜಿಲೆಂಡ್​ ನಾಯಕ ಕೇನ್​ ವಿಲಿಯಮ್ಸನ್​ 2 ಕೋಟಿ ರೂ. ಮೂಲಬೆಲೆಯೊಂದಿಗೆ ಹೊಸ ತಂಡದ ನಿರೀಕ್ಷೆಯಲ್ಲಿದ್ದಾರೆ.

ಹೀಗೆ ನಡೆಯುತ್ತೆ ಹರಾಜು ಪ್ರಕ್ರಿಯೆ ಒಟ್ಟು 405 ಆಟಗಾರರ ಪೈಕಿ ಮೊದಲಿಗೆ 86 ಆಟಗಾರರನ್ನು ಬ್ಯಾಟರ್ಸ್​, ಬೌಲರ್ಸ್​, ಆಲ್ರೌಂಡರ್ಸ್​ ಎಂಬಂತೆ ಒಟ್ಟು 13 ಸೆಟ್​ಗಳಲ್ಲಿ ಪ್ರತ್ಯೇಕವಾಗಿ ಹರಾಜಿಗೆ ಇಡಲಾಗುತ್ತದೆ. ಬಳಿಕ ತಂಡಗಳ ಬೇಡಿಕೆ ತಕ್ಕಂತೆ ಇತರ ಆಟಗಾರರನ್ನು ಹರಾಜಿಗೆ ಇಡಲಾಗುತ್ತದೆ. ಅಗತ್ಯಬಿದ್ದರೆ, ಮೊದಲ ಸುತ್ತಿನಲ್ಲಿ ಮಾರಾಟವಾಗದ ಆಟಗಾರನನ್ನು 2ನೇ ಸಲವೂ ಹರಾಜಿಗೆ ಇಡಬಹುದು. ಬಿಡ್ಡಿಂಗ್​ನಲ್ಲಿ 1 ಕೋಟಿ ರೂ.ವರೆಗೆ ತಲಾ 5 ಲಕ್ಷ ರೂ, ಬಳಿಕ 2 ಕೋಟಿ ರೂ.ವರೆಗೆ ತಲಾ 10 ಲಕ್ಷ ರೂ, 3 ಕೋಟಿ ರೂ.ವರೆಗೆ ತಲಾ 20 ಲಕ್ಷ ರೂ.ನಂತೆ ಏರಿಕೆಯಾಗಲಿದ್ದು, ಬಳಿಕ 25 ಲಕ್ಷ ರೂ.ನಂತೆ ಏರಿಕೆಯಾಗಲಿದೆ. ಹರಾಜಿನಲ್ಲಿ 2 ಕೋಟಿ ರೂ. ಗರಿಷ್ಠ ಮೂಲಬೆಲೆಯಾಗಿದೆ. 19 ವಿದೇಶಿ ಆಟಗಾರರು 2 ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ. 11 ಆಟಗಾರರು 1.5 ಕೋಟಿ ರೂ, 20 ಆಟಗಾರರು 1 ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ.

  • *ಹರಾಜು ಪ್ರಕ್ರಿಯೆ ಆರಂಭ: ಮಧ್ಯಾಹ್ನ 2.30
  • *ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಸಿನಿಮಾ

ದುಬಾರಿ ಎನಿಸಬಲ್ಲ ಸ್ಟಾರ್​ ಆಟಗಾರರು *ಬೆನ್​ ಸ್ಟೋಕ್ಸ್​ (ಇಂಗ್ಲೆಂಡ್​) *ಸ್ಯಾಮ್​ ಕರನ್​ (ಇಂಗ್ಲೆಂಡ್​) *ಕ್ಯಾಮರಾನ್​ ಗ್ರೀನ್​ (ಆಸ್ಟ್ರೆಲಿಯಾ) *ಮಯಾಂಕ್​ ಅಗರ್ವಾಲ್​ (ಭಾರತ) *ಹ್ಯಾರಿ ಬ್ರೂಕ್​ (ಇಂಗ್ಲೆಂಡ್​) *ನಿಕೋಲಸ್​ ಪೂರನ್​ (ವೆಸ್ಟ್​ ಇಂಡೀಸ್​) *ಜೇಸನ್​ ಹೋಲ್ಡರ್​ (ವೆಸ್ಟ್​ ಇಂಡೀಸ್​)

ದುಬಾರಿ ಆಗಬಲ್ಲ ದೇಶೀಯ ಆಟಗಾರರು

*ಜೆ. ಜಗದೀಶನ್​

*ಶಿವಂ ಮಾವಿ

*ಯಶ್​ ಠಾಕೂರ್​

*ಮುಕೇಶ್​ ಕುಮಾರ್​

*ಪ್ರಮುಖಾಂಶ

ಹರಾಜಿಗಿರುವವರು: 405

ಭಾರತೀಯರು: 273

ವಿದೇಶೀಯರು: 132

ಅಂತಾರಾಷ್ಟ್ರೀಯ ಆಟಗಾರರು: 119

ದೇಶೀಯ ಆಟಗಾರರು: 286

ಮಾರಾಟಗೊಳ್ಳಬಹುದಾದ ಗರಿಷ್ಠ ಆಟಗಾರರು: 87 (30 ವಿದೇಶೀಯರು)

ಕರ್ನಾಟಕದ 16 ಆಟಗಾರರು

ಹರಾಜಿನಲ್ಲಿ ಕರ್ನಾಟಕದ 16 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಈ ಪೈಕಿ ಮಯಾಂಕ್​ ಅಗರ್ವಾಲ್​ ಮತ್ತು ಮನೀಷ್​ ಪಾಂಡೆ ಗರಿಷ್ಠ ತಲಾ 1 ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ. ಕರುಣ್​ ನಾಯರ್​ 50 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ಉಳಿದಂತೆ ಶ್ರೇಯಸ್​ ಗೋಪಾಲ್​, ಜೆ. ಸುಚಿತ್​, ಮನೋಜ್​ ಭಾಂಡಗೆ, ಲವನೀತ್​ ಸಿಸೋಡಿಯ, ಬಿಆರ್​ ಶರತ್​, ವೈಶಾಖ್​ ವಿಜಯ್​ಕುಮಾರ್​, ವಿದ್ವತ್​ ಕಾವೇರಪ್ಪ, ಎಂ. ವೆಂಕಟೇಶ್​, ವಾಸುಕಿ ಕೌಶಿಕ್​ ಮತ್ತು ಮಹಾರಾಜ ಟ್ರೋಫಿಯಲ್ಲಿ ಮಿಂಚಿದ ಎಲ್​.ಆರ್​. ಚೇತನ್​, ರೋಹನ್​ ಪಾಟೀಲ್​, ಶುಭಾಂಗ್​ ಹೆಗ್ಡೆ, ಸಂಜಿತ್​ ದೇವರಾಜ್​ ತಲಾ 20 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ.

ತಂಡವೊಂದು ಗರಿಷ್ಠ 25 (8 ವಿದೇಶಿ) ಆಟಗಾರರನ್ನು ಹೊಂದಲು ಅವಕಾಶವಿದ್ದು, ಬಜೆಟ್​ ಮಿತಿ 95 ಕೋಟಿ ರೂ. ಆಗಿದೆ. ಡೆಲ್ಲಿಗೆ ಕನಿಷ್ಠ 5 ಮತ್ತು ಸನ್​ರೈಸರ್ಸ್​ಗೆ ಗರಿಷ್ಠ 13 ಆಟಗಾರರು ಬೇಕಾಗಿದ್ದಾರೆ.

ಹರಾಜಿನ ಮೊದಲ 5 ಸೆಟ್​ಗಳು

  • ಸೆಟ್​-1: ಬ್ಯಾಟರ್ಸ್​ (ಮೂಲಬೆಲೆ) ಮಯಾಂಕ್​ ಅಗರ್ವಾಲ್​-(1 ಕೋಟಿ ರೂ.) ಹ್ಯಾರಿ ಬ್ರೂಕ್​ (1.5 ಕೋಟಿ ರೂ.) ಅಜಿಂಕ್ಯ ರಹಾನೆ (50 ಲಕ್ಷ ರೂ.) ಜೋ ರೂಟ್​ (1 ಕೋಟಿ ರೂ.) ರಿಲೀ ರೋಸೌ (2 ಕೋಟಿ ರೂ.) ಕೇನ್​ ವಿಲಿಯಮ್ಸನ್​ (2 ಕೋಟಿ ರೂ.)
  • ಸೆಟ್​-2: ಆಲ್ರೌಂಡರ್ಸ್​ ಸ್ಯಾಮ್​ ಕರನ್​ (2 ಕೋಟಿ ರೂ.) ಕ್ಯಾಮರಾನ್​ ಗ್ರೀನ್​ (2 ಕೋಟಿ ರೂ.) ಶಕೀಬ್​ ಅಲ್​ ಹಸನ್​ (1.5 ಕೋಟಿ ರೂ.) ಜೇಸನ್​ ಹೋಲ್ಡರ್​ (2 ಕೋಟಿ ರೂ.) ಸಿಕಂದರ್​ ರಾಜಾ (50 ಲಕ್ಷ ರೂ.) ಓಡೆನ್​ ಸ್ಮಿತ್​ (50 ಲಕ್ಷ ರೂ.) ಬೆನ್​ ಸ್ಟೋಕ್ಸ್​ (2 ಕೋಟಿ ರೂ.)
  • ಸೆಟ್​-3: ವಿಕೆಟ್​ ಕೀಪರ್ಸ್ ಟಾಮ್​ ಬ್ಯಾಂಟನ್​ (2 ಕೋಟಿ ರೂ.) ಲಿಟನ್​ ದಾಸ್​ (50 ಲಕ್ಷ ರೂ.) ಹೆನ್ರಿಚ್​ ಕ್ಲಾಸೆನ್​ (1 ಕೋಟಿ ರೂ.) ಕುಸಲ್​ ಮೆಂಡಿಸ್​ (50 ಲಕ್ಷ ರೂ.) ನಿಕೋಲಸ್​ ಪೂರನ್​ (2 ಕೋಟಿ ರೂ.) ಫಿಲ್​ ಸಾಲ್ಟ್​ (2 ಕೋಟಿ ರೂ.)
  • ಸೆಟ್​-4: ವೇಗದ ಬೌಲರ್​ಗಳು ಕ್ರಿಸ್​ ಜೋರ್ಡನ್​ (2 ಕೋಟಿ ರೂ.) ಆಡಂ ಮಿಲ್ನೆ (2 ಕೋಟಿ ರೂ.) ಜೇ ರಿಚರ್ಡ್​ಸನ್​ (1.5 ಕೋಟಿ ರೂ.) ಇಶಾಂತ್​ ಶರ್ಮ (50 ಲಕ್ಷ ರೂ.) ರೀಸ್​ ಟಾಪ್ಲೆ (75 ಲಕ್ಷ ರೂ.) ಜೈದೇವ್​ ಉನಾದ್ಕತ್​ (50 ಲಕ್ಷ ರೂ.)
  • ಸೆಟ್​-5: ಸ್ಪಿನ್​ ಬೌಲರ್​ಗಳು ಅಕೀಲ್​ ಹೊಸೇನ್​ (1 ಕೋಟಿ ರೂ.) ಮಯಾಂಕ್​ ಮಾರ್ಕಂಡೆ (50 ಲಕ್ಷ ರೂ.) ಮುಜೀಬ್​ ಉರ್​ ರೆಹಮಾನ್​ (1 ಕೋಟಿ ರೂ.) ಆದಿಲ್​ ರಶೀದ್​ (2 ಕೋಟಿ ರೂ.) ತಬರೇಜ್​ ಶಮ್ಸಿ (1 ಕೋಟಿ ರೂ.) ಆಡಂ ಜಂಪಾ (1.5 ಕೋಟಿ ರೂ.)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net