

ನಾಪೋಕ್ಲು: ಇಲ್ಲಿಗೆ ಸಮೀಪದ ಅವಂದೂರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಗರ್ಭಗುಡಿ ಮತ್ತು ತೀರ್ಥ ಮಂಟಪದ ಶಿಲಾನ್ಯಾಸ ಕಾರ್ಯಕ್ರಮ ಶೃದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು.
ಏಳುನೂರು ವರ್ಷ ಪುರಾತನ ಇತಿಹಾಸವಿರುವ ಗ್ರಾಮದ ಧಾರ್ಮಿಕ ಸಾನ್ನಿಧ್ಯ ಗೋಪಾಲಕೃಷ್ಣ ದೇವಸ್ಥಾನ. ಶ್ರೀ ಕೃಷ್ಣ ಪರಮಾತ್ಮ ಅವಂದೂರು ಗ್ರಾಮದ ಗ್ರಾಮ ದೇವರು. ಪ್ರಸ್ತುತ ಶ್ರೀ ದೇವರ ಸನ್ನಿಧಿಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪೂರ್ವಭಾವಿ ಕೆಲಸ ಕಾರ್ಯಗಳು ಧಾರ್ಮಿಕ ವಿಧಿ-ವಿಧಾನದಂತೆ ಶೃದ್ಧಾ ಭಕ್ತಿಯಿಂದ ನಡೆಯುತ್ತಿದೆ.
ಕಾಸರಗೋಡಿನ ಪ್ರಸಿದ್ಧ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರ ಮಾರ್ಗದರ್ಶನದೊಂದಿಗೆ ತಂಡದವರಾದ ಮುರಾರಿ ಮತ್ತು ಸ್ಕಂದ ತಂತ್ರಿಗಳು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಗರ್ಭಗುಡಿ ಮತ್ತು ತೀರ್ಥ ಮಂಟಪದ ಶಿಲಾನ್ಯಾಸ ಕಾರ್ಯಕ್ರಮದ ವಿಶೇಷ ಪೂಜೆ , ವಿಧಿ-ವಿಧಾನಗಳನ್ನು ನೆರವೇರಿಸಿದರು.
ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಸರ್ವ ರೀತಿಯಲ್ಲೂ ಯಶಸ್ಸು ಕಾಣಲಿ. ನಮ್ಮ ಹೆಮ್ಮೆಯ ಸೈನಿಕರು ಯಾವುದೇ ಹಾನಿಯಿಲ್ಲದೆ ಸುರಕ್ಷಿತವಾಗಿ ಕಾರ್ಯಾಚರಿಸಲು ಶ್ರೀ ಗೋಪಾಲಕೃಷ್ಣಸ್ವಾಮಿ ಶಕ್ತಿ ನೀಡಲಿ ಎಂದು ದೇವರಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಪೂಜೆ ಸಲ್ಲಿಸಲಾಯಿತು.
ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕ ದಿನೇಶ್ ಭಟ್, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಡ್ಯದ ಸೋಮಣ್ಣ, ಉಪಾಧ್ಯಕ್ಷ ಚೊಕ್ಕಾಡಿ ಅಪ್ಪಯ್ಯ, ಕಾರ್ಯದರ್ಶಿ ಪಟ್ಟಡ ಸುಗುಣಕುಮಾರ್, ಖಜಾಂಚಿ ಬೆಳ್ಯನ ಚಂದ್ರಪ್ರಕಾಶ್, ಜೀರ್ಣೋದ್ಧಾರ ಸಮಿತಿಯ ಸರ್ವ ಪದಾಧಿಕಾರಿಗಳು, ದೇವಸ್ಥಾನ ಜೀರ್ಣೋದ್ಧಾರದ ಮೂಲ ಸಮಿತಿ, ಗ್ರಾಮದ ತಕ್ಕ ಮುಖ್ಯಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.
.