"ಅವರ ಭಾವನೆಗಳನ್ನು ನೋಯಿಸಿದ್ದರೆ ಕ್ಷಮಿಸಿ": ತ್ರಿಷಾ ಬಳಿ ಕ್ಷಮೆಯಾಚಿಸಿದ ತಮಿಳುನಾಡಿನ ರಾಜಕಾರಣಿ ಎವಿ ರಾಜು

raju
Published on

ಚೆನ್ನೈ: ಎಐಎಡಿಎಂಕೆ ಮಾಜಿ ಸದಸ್ಯ ಎವಿ ರಾಜು ನಟಿ ತ್ರಿಷಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಗಮನ ಸೆಳೆದಿದ್ದರು. ಆದರೆ ನಿರಂತರ ಪ್ರತಿಭಟನೆಗಳ ನಂತರ, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ರಾಜು ಕ್ಷಮೆಯಾಚಿಸಿದ್ದಾರೆ. "ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ತ್ರಿಶಾ ಅವರನ್ನು ಗುರಿಯಾಗಿಸುವ ಯಾವುದೇ ಉದ್ದೇಶವಿಲ್ಲ, ಅವರ ಭಾವನೆಗಳನ್ನು ನೋಯಿಸಿದ್ದರೆ ಕ್ಷಮಿಸಿ" ಎಂದು ಎವಿ ರಾಜು ವಿಡಿಯೋ ಮೂಲಕ ತ್ರಿಷಾಗೆ ಕ್ಷಮೆಯಾಚಿಸಿದ್ದಾರೆ.

ನಿನ್ನೆ ಸಂಜೆ ತ್ರಿಷಾ ವಿರುದ್ಧ ಎವಿ ರಾಜು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸೇಲಂ ಪಶ್ಚಿಮ ಶಾಸಕ ವೆಂಕಟಾಚಲಂ ಅವರಿಂದ ನಟಿ 25 ಲಕ್ಷ ರೂ.ಗಳನ್ನು ಸೆಟ್ಲ್‌ಮೆಂಟ್ ಹಣವಾಗಿ ಪಡೆದಿದ್ದಾರೆ ಎಂದು ಹೇಳಿದ್ದರು. ಅವರ ಹೇಳಿಕೆ ತಕ್ಷಣವೇ ಟೀಕೆಗೆ ಒಳಗಾಗಲು ಪ್ರಾರಂಭಿಸಿತು. ತ್ರಿಷಾ ಎವಿ ರಾಜು ವಿರುದ್ಧ ಕಾನೂನು ಮೊರೆ ಹೋಗುವುದಾಗಿ ತಿಳಿಸಿದರು. ತ್ರಿಷಾ ಬೆಂಬಲಕ್ಕೆ ಹಲವು ತಾರೆಯರು ಕೂಡ ಮುಂದೆ ಬಂದರು.

ತಮಿಳುನಾಡು ಫಿಲಂ ಕೌನ್ಸಿಲ್ ಮುಖ್ಯಸ್ಥ, ನಟ ವಿಶಾಲ್ ಕೂಡ ಎವಿ ರಾಜು ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದರು. ತ್ರಿಶಾ ಕೂಡ ಈ ಕುರಿತು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು.

ಎಐಎಡಿಎಂಕೆಯ ಮಾಜಿ ನಾಯಕ ತ್ರಿಶಾಗೆ ಸಂಬಂಧಿಸಿದಂತೆ ನೀಡಿರುವ ವಿವಾದಾತ್ಮಕ ಹೇಳಿಕೆಯಿಂದ ಈ ವಿವಾದ ಆರಂಭವಾಯಿತು. ತ್ರಿಷಾ ಅವರನ್ನು ಶಾಸಕರ ರೆಸಾರ್ಟ್‌ಗೆ ಕರೆಸಲಾಗಿತ್ತು, ಅದಕ್ಕಾಗಿ ಆಕೆಗೆ ದೊಡ್ಡ ಮೊತ್ತವನ್ನೂ ನೀಡಲಾಗಿದೆ ಎಂದು ಹೇಳಿದ್ದರು. ಹೀಗೆ ತ್ರಿಷಾ ವಿರುದ್ಧ ಎವಿ ರಾಜು ಗಂಭೀರ ಆರೋಪ ಮಾಡಿದ್ದರು.

ಅವರ ಹೇಳಿಕೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಉಂಟಾಗಿ ಹಲವರು ರಾಜು ಅವರನ್ನು ಟ್ರೋಲ್ ಮಾಡಲು ಆರಂಭಿಸಿದರು. ಪ್ರಸ್ತುತ ತ್ರಿಶಾ ಕೃಷ್ಣನ್ ತಮಿಳು ಚಿತ್ರಗಳಾದ 'ಥಗ್ ಲೈಫ್' ಮತ್ತು 'ವಿದಾ ಮುಯಾರ್ಚಿ' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net