ದ.ಕ. ಆಟೊಮೊಬೈಲ್ ಮತ್ತು ಟೈರ್ ಡೀಲರ್ಸ್ ಅಸೋಸಿಯೇಷನ್ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸಭೆ

mng--29 April Automobile
Published on

ಮಂಗಳೂರು: ದಕ್ಷಿಣ ಕನ್ನಡ ಆಟೊಮೊಬೈಲ್ ಮತ್ತು ಟೈರ್ ಡೀಲರ್ಸ್ ಅಸೋಸಿಯೇಷನ್ (ಡಿಕೆಎಟಿಡಿಎ) ಅಖಿಲ ಭಾರತ ಆಟೋಮೊಬೈಲ್ ಬಿಡಿಭಾಗಗಳ ಮಾರಾಟಗಾರರ ಸಂಘಗಳ ಒಕ್ಕೂಟದ (ಫಯಾಸ್ಪಡಾ) ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸಭೆ ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಜರುಗಿತು.


ಫಯಾಸ್ಪಡಾ ಅಧ್ಯಕ್ಷ ಸಂಜಯ್ ಸೋನಾವಾನೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಹರ್‌ವಂಶ್ ಸಿಂಗ್ ಸೇಥಿ ಮತ್ತು ಜಂಟಿ ಕಾರ್ಯದರ್ಶಿ ಹರ್ಜಿತ್ ಆನಂದ್, ಡಿಕೆಎಟಿಡಿಎ ವತಿಯಿಂದ ಸಂಘದ ಅಧ್ಯಕ್ಷ ಕಸ್ತೂರಿ ಪ್ರಭಾಕರ್ ಪೈ, ಕಾರ್ಯದರ್ಶಿ ಕೆ. ವಿಲಾಸ್ ಕುಮಾರ್ ಉಪಸ್ಥಿತರಿದ್ದರು.
ಮುಂಬೈ, ನಾಸಿಕ್, ಕಲ್ಕತ್ತಾ, ಕೊಲ್ಹಾಪುರ ಮತ್ತಿತರ ಸ್ಥಳಗಳಿಂದ ಆಗಮಿಸಿದ ಪ್ರತಿನಿಧಿಗಳು, ಸ್ಥಳೀಯ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಭಾಗವಹಿಸಿದ್ದರು.


ಫಯಾಸ್ಪಡಾ ಆಟೋಮೊಬೈಲ್ ವ್ಯಾಪಾರದ ರಾಷ್ಟ್ರೀಯ ಮಟ್ಟದ ಅತ್ಯುನ್ನತ ಸಂಸ್ಥೆಯಾಗಿದ್ದು, ನವದೆಹಲಿಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. 33 ಸದಸ್ಯ ಸಂಘಗಳೊಂದಿಗೆ, ಇದು ರಾಷ್ಟ್ರವ್ಯಾಪಿ ಸರಿಸುಮಾರು 60,000 ಮಾರಾಟಗಾರರನ್ನು ಪ್ರತಿನಿಧಿಸುತ್ತದೆ. ಸಂಘಟನೆಯು ತನ್ನ ಅಖಿಲ ಭಾರತ ಉಪಸ್ಥಿತಿಯನ್ನು ಪ್ರತಿಬಿಂಬಿಸಲು ದೇಶದ ವಿವಿಧ ನಗರಗಳಲ್ಲಿ ತ್ರೈಮಾಸಿಕ ಸಭೆಗಳನ್ನು ನಡೆಸುವ ಸಂಪ್ರದಾಯವನ್ನು ಹೊಂದಿದೆ. ಮಂಗಳೂರಿನಲ್ಲಿ ಸ್ಥಳೀಯ ಸಂಘ ಡಿಕೆಎಟಿಡಿಎ ವತಿಯಿಂದ ಈ ಹಿಂದೆ 2016ರ ಜನವರಿಯಲ್ಲಿ ಸಭೆ ನಡೆದಿತ್ತು.


ಸ್ಥಳೀಯ ಸಂಘ ಡಿಕೆಎಟಿಡಿಎ ಕಾರ್ಯದರ್ಶಿ ಕೆ. ವಿಲಾಸ್ ಕುಮಾರ್ ಅವರು ಪ್ರತಿನಿಧಿಗಳನ್ನು ಸ್ವಾಗತಿಸಿದರು. ಕೋಶಾಧಿಕಾರಿ ಮಾರೂರ್ ಶಶಿಧರ್ ಪೈ ವಂದಿಸಿದರು. ಕಲ್ಕತ್ತಾ ಮೋಟಾರ್ ಡೀಲರ್ಸ್ ಅಸೋಸಿಯೇಶನ್‌ನ ಮೋನಿಶ್ ನಾಥ್ ಬ್ಯಾನರ್ಜಿ ಫಯಾಸ್ಪಡಾ ವಂದಿಸಿದರು. ಸಂಜೆ ಆಯೋಜಿಸಿದ್ದ ಔತಣ ಕೂಟದೊಂದಿಗೆ ಪ್ರತಿನಿಧಿಗಳಿಗೆ ಮಂಗಳೂರಿನ ಆತ್ಮೀಯ ಆತಿಥ್ಯ ನೀಡಲಾಯಿತು. ಮರುದಿನ ಬೆಳಗ್ಗೆ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ, ನಂತರ ಸಾಂಪ್ರದಾಯಿಕ ಮೀನು ಊಟವನ್ನು ಏರ್ಪಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net