

ಬೆಂಗಳೂರು ದಲಿತ ಮತ್ತು ಬಂಡಾಯ ಸಾಹಿತಿಗಳ ಆತ್ಮಕತೆಗಳು ಹೊಸ ಮಾದರಿಯ ಸಾಹಿತ್ಯ ಸೃಷ್ಟಿಗೆ ಕಾರಣವಾಗಿವೆ ಎಂದು ಚಿಂತಕ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಭಾನುವಾರ ಹೆಮ್ಮಂಡಹಳ್ಳಿ ಜಿ. ಮುನಿಸ್ವಾಮಿ ಅವರ ಆತ್ಮಕಥನ ‘ಹೆಮ್ಮಂಡಹಳ್ಳಿಯಿಂದ....’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಳೆದ 50 ವರ್ಷದಲ್ಲಿ ಮರಾಠಿಯಲ್ಲಿ ಆರಂಭವಾದ ದಲಿತ ಆತ್ಮಕತೆಗಳು ಕನ್ನಡದಲ್ಲಿಯೂ ಜನಪ್ರಿಯವಾಗಿವೆ. ಬಾಬಾ ಸಾಹೇಬ ಅಂಬೇಡ್ಕರರ ಸಂವಿಧಾನ ಮತ್ತು ಸ್ವಾತಂತ್ರ್ಯ ಬರುವ ತನಕ ಅಕ್ಷರದಿಂದ ವಂಚಿತರಾಗಿದ್ದ ಜನರಿಗೆ ಹೊಸ ಬದುಕು ಸಾಹಿತ್ಯ ಲೋಕಕ್ಕೆ ತೆರೆದುಕೊಳ್ಳಲು ಸಾಧ್ಯವಾಯಿತು. ಅಲ್ಲಿಯವರೆಗೂ ಸಾಹಿತ್ಯದಲ್ಲಿ ಅವರ ಪಾತ್ರವೇ ಇರಲಿಲ್ಲ. ಬದಲಾದ ಕಾಲಘಟ್ಟದಲ್ಲಿ ಹೊಸ ಬಗೆಯ ಸಾಹಿತ್ಯ ಕೃತಿಗಳು ದೊರೆತವು ಎಂದು ತಿಳಿಸಿದರು.
ಶೂದ್ರ ವರ್ಗವೇ ಬಹುಸಂಖ್ಯಾತವಾಗಿರುವ ದೇಶದಲ್ಲಿ ಅವರ ಬದುಕನ್ನು ತಿಳಿಸಿಕೊಟ್ಟಿದ್ದು ದಲಿತ ಸಾಹಿತ್ಯ. ದೇವನೂರು ಮಹಾದೇವರ ಕತೆಗಳು ಪ್ರಕಟವಾಗಿದ್ದರೂ ಅದಕ್ಕೊಂದು ನಿಖರತೆ ಸಿಕ್ಕಿದ್ದು ಆತ್ಮಕತೆಗಳಿಂದ ಎಂದರೆ ತಪ್ಪಲ್ಲ ಎಂದರು.
ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ,. ವಿಜ್ಞಾನ, ತಂತ್ರಜ್ಞಾನ ಬೆಳೆದಿದೆ. ಆದರೂ ಪ್ರತಿ ದಿನ ಒಂದಲ್ಲಾ ಒಂದು ರೀತಿಯಲ್ಲಿ ಹೊಸತನದ ಶೋಷಣೆಗಳು ನಡೆಯುತ್ತಿವೆ. ಮೊದಲಿನಷ್ಟು ಹಸಿವು ಇಲ್ಲದಿರಬಹುದು, ಬಡತನ ಕಡಿಮೆಯಾಗಿರಬಹುದು. ಆದರೆ, ಬೆಂಗಳೂರಿನಂತಹ ಮಹಾನಗರದಲ್ಲಿ ಜಾತಿ ಕೇಳಿ ಬಾಡಿಗೆ ಮನೆ ಕೊಡುತ್ತಾರೆ. ಇದಕ್ಕೆ ಪರಿಹಾರವಿಲ್ಲವೇನೋ ಎಂಬಂತೆ ಭಾಸವಾಗುತ್ತಿದೆ ಎಂದಬ ಆತಂಕ ವ್ಯಕ್ತಪಡಿಸಿದರು.
ಪತ್ರಕರ್ತ ಚ.ಹ. ರಘುನಾಥ ಮಾತನಾಡಿ, ಸಾಮಾನ್ಯವಾಗಿ ದಲಿತ ಕವಿಗಳ ಕೃತಿಗಳು ಎಂದಾಗ ಕಹಿ ಘಟನೆಗಳ ಬಗ್ಗೆಯೇ ದಾಖಲಾಗಿರುತ್ತದೆ. ಆದರೆ, ಇಲ್ಲಿ ಮೇಲ್ವರ್ಗದ ಮಾನವೀಯ ಘಟನೆಗಳನ್ನು ಕೂಡ ದಾಖಲಾಗಿವೆ. ಅದೇ ರೀತಿ ಮುನಿಸ್ವಾಮಿ ಅವರು ಕರಕುಶಲ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆಯಲ್ಲಿ ದಲಿತ ನೌಕರರಿಂದಲೇ ಅಡ್ಡಿ-ಆತಂಕಗಳನ್ನು ಎದುರಿಸಿರುವ ಬಗ್ಗೆಯೇ ಪ್ರಸ್ತಾಪ ಮಾಡಿದ್ದಾರೆ ಎಂದರು.
ಸರ್ಕಾರಿ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿಗಳ ಆತ್ಮಕತೆಗಳು ಕೂಡ ಸರ್ಕಾರಿ ಭಾಷೆಯಲ್ಲಿಯೇ ಇರುತ್ತವೆ. ಆದರೆ, ಮುನಿಸ್ವಾಮಿ ಅವರ ಸಾಹಿತ್ಯ ಸೃಜನಶೀಲತೆಯಿಂದ ಕೂಡಿದೆ. ಕೇವಲ ಆತ್ಮಕತೆಯಲ್ಲ, ಮುಂದಿನ ದಿನಗಳಲ್ಲಿಯೂ ಸೃಜನಶೀಲ ಸಾಹಿತ್ಯ ಕೃಷಿಯನ್ನು ಮುಂದುವರಿಸುವಂತೆ ಸಲಹೆ ನೀಡಿದರು.
ಇಂದಿನ ತಲೆಮಾರಿನವರಿಗೆ ಹಸಿವು, ಬಡತನವನ್ನು ಅನುಭವಿಸುತ್ತಿಲ್ಲ. ಅಂತಹ ನೋವಿನ ಜೀವನವನ್ನು ಈ ಕೃತಿಯಲ್ಲಿ ತಿಳಿಯಬಹುದಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಹೆಮ್ಮೆಂಡಹಳ್ಳಿ ಎಂಬ ಕುಗ್ರಾಮಕ್ಕೆ ವಿದ್ಯುತ್, ಕುಡಿಯುವ ನೀರು, ವಸತಿಗಾಗಿ ಹೋರಾಟದ ಜೀವನ ತಿಳಿಯುತ್ತದೆ ಎಂದರು.
ವಿಮರ್ಶಕ ಡಾ. ಬಸವರಾಜ ಕಲ್ಗುಡಿ ಮಾತನಾಡಿ, ಮೇಲ್ವರ್ಗ ಹಾಗೂ ಕೆಳವರ್ಗದ ಸಂಘರ್ಷದಲ್ಲಿ ವ್ಯಕ್ತಿಗಳು ಹೇಗೆ ಮನುಷ್ಯರಾಗಬೇಕು ಎನ್ನುವುದನ್ನು ದಲಿತ ಕಥನಗಳು ನಮ್ಮ ಮುಂದಿಡುತ್ತವೆ. ಅದಕ್ಕೆ ಉತ್ತಮವಾದ ಕೃತಿ ಹೆಮ್ಮಂಡಹಳ್ಳಿಯಿಂದ ಆಗಿದೆ. ಇಲ್ಲಿ ಪ್ರಯೋಗಿಸಿರುವ ಭಾಷೆಯು ಜೀವಂತಿಕೆಯ ಸಾಕ್ಷಿಯಾಗಿ ನಮ್ಮ ಮುಂದಿದೆ ಎಂದರು.
ಕಾರ್ಯಕ್ರಮದಲ್ಲಿ ವಿಮರ್ಶಕ ಎಚ್. ದುಂಡಪ್ಪ ಉಪಸ್ಥಿತರಿದ್ದರು.
ಆತ್ಮಕತೆಯಲ್ಲಿ ಎಲ್ಲಿಯೂ ಕಲ್ಪನೆಯನ್ನು ಬೆರೆಸಿಲ್ಲ. ನೈಜ ಅಂಶಗಳನ್ನು ದಾಖಲಿಸಿದ್ದೇನೆ. ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಪಟ್ಟ ಪಾಡನ್ನು ಹಾಗೂ ಅನುಭವದ ದಿನಗಳನ್ನು ಬರೆದಿದ್ದೇನೆ. - ಹೆಮ್ಮಂಡಹಳ್ಳಿ ಜಿ. ಮುನಿಸ್ವಾಮಿ, ಲೇಖಕ