

ಬೆಂಗಳೂರು: ಜೈಶ್ರೀರಾಮ್ ಎಂದು ಕೂಗಿದ ಯುವಕ-ಯುವತಿಗೆ ಪ್ರಾಣ ಬೆದರಿಕೆ ಹಾಕಿದ ಆರೋಪದಡಿ ಆಟೋ ಚಾಲಕನನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಣನಕುಂಟೆಯ ಹರಿನಗರ ನಿವಾಸಿ ನಯಾಜ್(೨೩) ಬಂಧಿತ. ಆರೋಪಿಯ ವಿರುದ್ಧ ವ್ಯಕ್ತಿಯ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋದಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ಆರೋಪಿಯ ವಿಚಾರಣೆಯಲ್ಲಿ, ‘ತಾನು ಇನ್‌ಸ್ಟ್ರಾಗ್ರಾಂನಲ್ಲಿ ಖಾತೆ ಹೊಂದಿದ್ದು, ಈ ವೇಳೆ ಬುರ್ಖ ಧರಿಸಿದ್ದ ಯುವತಿ ಮತ್ತು ಟೋಪಿ ಧರಿಸಿದ್ದ ಯುವಕ ಜೈಶ್ರೀರಾಮ್ ಎಂದು ಘೋಷಣೆ ಕೂಗಿದ್ದರು. ಹೀಗಾಗಿ ಅದಕ್ಕೆ ಪ್ರತಿಕ್ರಿಯೆ ನೀಡಿದ್ದೆ. ಬೇರೆ ಯಾವುದೇ ಉದ್ದೇಶವಿಲ್ಲ. ಬಳಿಕ ತಾನೂ ನೀಡಿರುವ ಪ್ರತಿಕ್ರಿಯೆ ವಿಡಿಯೋ ಡಿಲೀಟ್ ಮಾಡಿದ್ದೇನೆ ಎಂದಿದ್ದಾನೆ. ಆರೋಪಿ ಆಟೋ ಚಾಲಕನಾಗಿದ್ದು, ಈತನ ವಿರುದ್ಧ ಈ ಹಿಂದೆ ಬೇರೆ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿಲ್ಲ ಎಂಬದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?
ವೈರಲ್ ವಿಡಿಯೋದಲ್ಲಿ ಒಬ್ಬ ಯುವಕ-ಯುವತಿ ಹಿಂದೆ ಮುಂದೆ ನಿಂತುಕೊಂಡು, ಒಬ್ಬರ ಬಳಿಕ ಇನ್ನೊಬ್ಬರು ಜೈಶ್ರೀರಾಮ್ ಎನ್ನುತ್ತಾರೆ. ‘ದಿಲ್ ದಿಮಾಗ್ ಮೇ ಏಕೀ ನಾಮ್ ಜೈಶ್ರೀರಾಮ್’(ಹೃದಯ ಮತ್ತು ಮನಸ್ಸಿನಲ್ಲಿ ಒಂದೇ ಹೆಸರು ಜೈಶ್ರೀರಾಮ್) ಎಂದು ಹೇಳುತ್ತಾರೆ. ಅದಕ್ಕೆ ನಯಾಜ್ ಬುರ್ಖಾ ಮತ್ತು ಟೋಪಿ ತೆಗೆದು ಮಾತನಾಡಿ. ನಿಜವಾದ ಮುಸಲ್ಮಾನರು ಎದುರು ಬಂದು ಮಾತನಾಡಿದರೆ ಸೀಳಿ ಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದ. ಈ ವಿಡಿಯೋವನ್ನು ದಿ ರೈಟ್ ವಿಂಗ್ ಗಾಯ್ ಎಂಬ ಟ್ವಿಟರ್ ಖಾತೆದಾರ ಶೇರ್ ಮಾಡಿ, ಬೆಂಗಳೂರಿನಲ್ಲಿ ನಡೆದಿದೆ ಎಂದು ಉಲ್ಲೇಖಿಸಿ, ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ದೃಶ್ಯ ಎಲ್ಲಿಯದು? ಜೈಶ್ರೀರಾಮ್ ಎಂದು ಹೇಳಿದವರು ನಿಜಕ್ಕೂ ಮುಸಲ್ಮಾನರಾ? ಅಥವಾ ಅವರು ಹಿಂದುಗಳಾಗಿದ್ದು ಈ ರೀತಿ ವಸ್ತ್ರ ಧರಿಸಿ ವಿಡಿಯೋ ಮಾಡಿದ್ದಾರಾ? ಎಂಬುದು ಗೊತ್ತಿಲ್ಲ. ಜೈಶ್ರೀರಾಮ್ ಎಂದು ಕೂಗುವ ಯುವಕ ಕ್ರಿಶ್ಚಿಯನ್ ಧರಿಸುವ ಶಿಲುಬೆ ಇರುವ ಸರ ಧರಿಸಿದ್ದಾನೆ. ಹೀಗಾಗಿ ಈ ವಿಡಿಯೋ ಎಲ್ಲಿಯದ್ದು ಎಂಬುದು ತಿಳಿದು ಬಂದಿಲ್ಲ. ಆದರಿಂದ ಸೈಬರ್ ಪೊಲೀಸರ ನೆರವು ಕೋರಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.