ಭಾರತದ ಕೋವಾಕ್ಸಿನ್​ಗೆ ಮಾನ್ಯತೆ ನೀಡಿದ ಆಸ್ಟ್ರೇಲಿಯಾ

covaxin
Published on

ಸಿಡ್ನಿ: ಭಾರತದ ಸಂಪೂರ್ಣ ದೇಸೀ ಕರೊನಾ ಲಸಿಕೆಯಾದ ಕೋವಾಕ್ಸಿನ್​​ಗೆ ಆಸ್ಟ್ರೇಲಿಯಾ ಸರ್ಕಾರ ಮಾನ್ಯತೆ ನೀಡಿದೆ. ಇದರಿಂದಾಗಿ ಕೋವಾಕ್ಸಿನ್​ ಪಡೆದಿರುವ ಭಾರತೀಯರು ಆಸ್ಟ್ರೇಲಿಯಾಗೆ ಪ್ರಯಾಣಿಸಲು ಅನುಕೂಲ ಮಾಡಿಕೊಟ್ಟಂತಾಗಿದೆ. ಭಾರತದ ಕೋವಿಶೀಲ್ಡ್​ ಲಸಿಕೆಗೆ ಇದಕ್ಕೂ ಮುಂಚೆಯೇ ಮಾನ್ಯತೆ ನೀಡಲಾಗಿತ್ತು.

ಭಾರತ್​ ಬಯೋಟೆಕ್​ ತಯಾರಿಸುವ ಲಸಿಕೆಯಾದ ಕೋವಾಕ್ಸಿನ್​ಅನ್ನು ಜಾಗತಿಕ ಮಟ್ಟದ ಎಮರ್ಜೆನ್ಸಿ ಯೂಸ್​ ಲಿಸ್ಟಿಂಗ್​(ಈಯುಎಲ್​)ಗೆ ಸೇರಿಸುವ ಬಗ್ಗೆ, ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್​​ಒ), ಇನ್ನೆರಡು ದಿನಗಳಲ್ಲಿ ಅಂತಿಮ ಚರ್ಚೆ ಇಟ್ಟುಕೊಂಡಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಈ ನಿರ್ಧಾರವು ಸಕಾರಾತ್ಮಕ ಬೆಳವಣಿಗೆಯಾಗಿದೆ.

ಈ ಮುನ್ನ ಸೀರಮ್​ ಇನ್​​ಸ್ಟಿಟ್ಯೂಟ್​ನ ಕೋವಿಶೀಲ್ಡ್​ ಲಸಿಕೆಗೆ ಮತ್ತು ಚೀನಾದ ಸಿನೋವಾಕ್​ಗೆ ಸಹ ಈ ದೇಶ ಮನ್ನಣೆ ನೀಡಿತ್ತು. ಆಸ್ಟ್ರೇಲಿಯಾದಲ್ಲಿ ಲಸಿಕೆಗಳನ್ನು ನಿಯಂತ್ರಿಸುವ ಮತ್ತು ಪರವಾನಗಿ ನೀಡುವ ಥೆರಪಿಟಿಕ್ಸ್​ ಗೂಡ್ಸ್​ ಅಡ್​ಮಿನಿಸ್ಟ್ರೇಷನ್​ ಈ ಬಗ್ಗೆ ಹೇಳಿಕೆ ನೀಡಿದ್ದು, "ಈ (ಗುರುತಿಸಲ್ಪಟ್ಟ) ಲಸಿಕೆಗಳು ರಕ್ಷಣೆ ಒದಗಿಸುತ್ತವೆ ಹಾಗೂ ಇದನ್ನು ಪಡೆದ ಪ್ರಯಾಣಿಕರು ಆಸ್ಟ್ರೇಲಿಯಾದಲ್ಲಿ ಇತರರಿಗೆ ಕೋವಿಡ್​ 19 ಹರಡುವ ಅಥವಾ ಕೋವಿಡ್​ 19 ಸೋಂಕಿನಿಂದ ತುಂಬಾ ಅನಾರೋಗ್ಯಕ್ಕೀಡಾಗುವ ಸಾಧ್ಯತೆಗಳನ್ನು ಕಡಿಮೆ ಎಂದು ತೋರಿಸುವ ಹೆಚ್ಚುವರಿ ಮಾಹಿತಿ ನಮಗೆ ಕಳೆದ ಕೆಲವು ವಾರಗಳಲ್ಲಿ ಲಭ್ಯವಾಗಿದೆ" ಎಂದಿದೆ.

ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಕೋವಿಶೀಲ್ಡ್​ ಮತ್ತು ಕೋವಾಕ್ಸಿನ್​ ಪಡೆದಿರುವ ಭಾರತೀಯರು ಹಾಗೂ ಇತರ ದೇಶಗಳ ನಾಗರಿಕರನ್ನು ಆಸ್ಟ್ರೇಲಿಯಾ ಪೂರ್ಣ ಲಸಿಕೀಕೃತರೆಂದು ಪರಿಗಣಿಸಲಿದೆ. ಇದರಿಂದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಅಲ್ಲಿಗೆ ಮರಳಲು ಮತ್ತು ಉದ್ಯೋಗಿಗಳು-ಕಾರ್ಮಿಕರು ಪ್ರಯಾಣಿಸಲು ಅವಕಾಶ ಒದಗಿದಂತಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net