ಸೋದರನ 2ವರ್ಷದ ಮಗುವನ್ನು ಕೊಂದು, ವಾರ್ಡ್​ರೋಬ್​​ನಲ್ಲಿ ಬಚ್ಚಿಟ್ಟ ಪಿಂಕಿ-ರಿಂಕಿ...

Noida
Published on

ನೊಯ್ಡಾ: ತವರು ಮನೆಗೆ ಬಂದ ಹೆಣ್ಣುಮಕ್ಕಳು ತಮ್ಮ ಸಹೋದರನ ಎರಡು ವರ್ಷದ ಮಗುವನ್ನು ಕೊಂದು ಜೈಲು ಸೇರಿದ್ದಾರೆ.

ಉತ್ತರ ಪ್ರದೇಶದ ಗ್ರೇಟರ್​ ನೊಯ್ಡಾದಲ್ಲಿ ಘಟನೆ ನಡೆದಿದೆ. ಅತ್ತಿಗೆ (ಸೋದರನ ಪತ್ನಿ) ಯ ಮೇಲಿನ ಅಸೂಯೆಯಿಂದ ಮಗುವನ್ನೇ ಹತ್ಯೆ ಮಾಡಿದ ಕಿರಾತಕಿಯರು ನಂತರ ಮೃತದೇಹವನ್ನು ಕಂಬಳಿಯಲ್ಲಿ ಸುತ್ತಿ ವಾರ್ಡ್​ರೋಬ್​​ನಲ್ಲಿ ಇಟ್ಟಿದ್ದರು. ಘಟನೆಯ ಬಗ್ಗೆ ಸೆಂಟ್ರಲ್​ ನೊಯ್ಡಾದ ಡಿಸಿಪಿ ಹರೀಶ್​ ಚಂದರ್​ ಮಾಹಿತಿ ನೀಡಿದ್ದಾರೆ.

ಸೆ.29ರಂದು ಮಗು ಕಾಣೆಯಾದಾಗ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ಆದರೆ ಅಂದೇ ರಾತ್ರಿ ಮಗು ವಾರ್ಡ್​ರೋಬ್​​ನಲ್ಲಿ ಪತ್ತೆಯಾಯಿತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟರಲ್ಲಾಗಲೇ ಅದು ಮೃತಪಟ್ಟಿತ್ತು. ಮಗು ಉಸಿರುಕಟ್ಟಿ ಸತ್ತಿದೆ ಎಂದು ವೈದ್ಯರು ತಿಳಿಸಿದರು. ಇದನ್ನೂ ಓದಿ: ‘ದೇಶದಲ್ಲಿ ರೇಪ್​ ಕೇಸ್ ಹೆಚ್ಚಲು ಯುವಕರ ಕುತೂಹಲ, ಇಂಟರ್ನೆಟ್​ ಕಾರಣ…’

ಕೆಲವು ಪುರಾವೆಗಳು ಸಿಕ್ಕ ಹಿನ್ನೆಲೆಯಲ್ಲಿ ಆ ಇಬ್ಬರು ಮಹಿಳೆಯರನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು. ಪೊಲೀಸರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲಾಗದ ಮಹಿಳೆಯರು ಕೊನೆಗೇ ಕೃತ್ಯವನ್ನು ತಾವೇ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಸೋದರಿಯರಾದ ಪಿಂಕಿ ಮತ್ತು ರಿಂಕಿ ಬಂಧಿತ ಆರೋಪಿಗಳು. ಇಬ್ಬರೂ 30ರ ಆಸುಪಾಸಿನ ವಯಸ್ಸು. ಮಗುವಿನ ತಾಯಿ ಸ್ವಪ್ನಾ ಜತೆ ಕೆಲವು ಮನಸ್ತಾಪ ಹೊಂದಿದ್ದಲ್ಲದೆ, ಆಕೆಯನ್ನು ಕಂಡರೆ ಸದಾ ಅಸೂಯೆ ಪಟ್ಟುಕೊಳ್ಳುತ್ತಿದ್ದರು.

ಪಿಂಕಿ ಹಾಗೂ ರಿಂಕಿಯ ಅಣ್ಣ ಯಾವಾಗಲೂ ಪತ್ನಿಯನ್ನು ಹೊಗಳುತ್ತಿದ್ದ. ತನ್ನ ಪತ್ನಿಯನ್ನು ಹೊಗಳಿ, ಸೋದರಿಯರನ್ನು ತೆಗಳುತ್ತಿದ್ದ. ಇದು ಪಿಂಕಿ-ರಿಂಕಿ ಅಸಮಾಧಾನಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟಿತ್ತು. ಇದೆಲ್ಲವನ್ನೂ ವಿಚಾರಣೆ ವೇಳೆ ಸೋದರಿಯರು ಒಪ್ಪಿಕೊಂಡಿದ್ದಾರೆ. ಅವರ ವಿರುದ್ಧ ಎಫ್​ಐಆರ್ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net