

ವಾರಾಣಸಿ: ಅಯೋಧ್ಯಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಭೂಮಿಪೂಜೆ ನಡೆಸಲು ನಿಗದಿ ಪಡಿಸಲಾಗಿರುವ ಆಗಸ್ಟ್ 5ರ ಮುಹೂರ್ತ ಶುಭಪ್ರದವಲ್ಲ ಎಂದು ವಾರಾಣಸಿಯ ಶ್ರೀಗಳು ಹಾಗೂ ಸಂತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ರೆ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಶ್ರೀಗಳ ಬಳಿಕ ಈಗ, ಸ್ವಾಮಿ ಶ್ರೀ ಅವಿಕ್ತೇಶ್ವರಾನಂದ ಹಾಗೂ ಸುಮೇರು ಪೀಠದ ಶ್ರೀ ನರೇಂದ್ರಾನಂದ ಮಹಾರಾಜ್ ಕೂಡ ಆ.5ರ ಮುಹೂರ್ತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ನಲ್ಲಿ ಭೂಮಿ ಪೂಜೆಗೆ ಯಾವುದೇ ಶುಭ ಮುಹೂರ್ತಗಳಿಲ್ಲ. ಅವರು ತಮ್ಮ ಅನುಕೂಲಕ್ಕಾಗಿ ಭೂಮಿಪೂಜೆ ನಡೆಸುತ್ತಿದ್ದಾರೆ. ಶಾಸ್ತ್ರಸಮ್ಮತವಾಗಿ ಭೂಮಿ ಪೂಜೆ ನಡೆಯದಿದ್ದರೆ, ಋಣಾತ್ಮಕ ಪರಿಣಾಮಗಳು ಉಂಟಾಗುತ್ತವೆ ಎಂದು ಸ್ವಾಮಿ ಶ್ರೀ ಅವಿಕ್ತೇಶ್ವರಾನಂದ ಶ್ರಿಗಳು ಹೇಳಿದ್ದಾರೆ.
ಶ್ರೀರಾಮ ಮಂದಿರಕ್ಕೆ 1990 ನವೆಂಬರ್ 5ರಂದೇ ವಿಎಚ್ಪಿ ಮುಖಂಡರು, ಅಂದಿನ ಆರ್ಎಸ್ಎಸ್ ಮುಖ್ಯಸ್ಥರು ಹಾಗೂ ಶ್ರೀಗಳ ಸಮ್ಮುಖದಲ್ಲಿ ಭೂಮಿಪೂಜೆ ನಡೆಸಲಾಗಿದೆ ಎಂದು ಶ್ರೀ ನರೇಂದ್ರಾನಂದ ಮಹಾರಾಜ್ ಹೇಳಿದ್ದಾರೆ.
ನಮಗೆ ರಾಮ ಜನ್ಮಭೂಮಿ ಟ್ರಸ್ಟ್ನಲ್ಲಿ ಯಾವುದೇ ಹುದ್ದೆ ಬೇಡ. ಮಂದಿರ ನಿರ್ಮಾಣ ಕಾರ್ಯ ಶುಭಕಾಲದಲ್ಲಿ ಆರಂಭವಾಗಬೇಕು ಎಂಬುದಷ್ಟೇ ನಮ್ಮ ಇಚ್ಛೆಯಾಗಿದೆ. ಇಂಥ ಅಶುಭ ಗಳಿಗೆಯಲ್ಲಿ ಭೂಮಿಪೂಜೆ ನಡೆಸುವುದು ಬೇಡ ಎಂದು ಶ್ರೀ ಅವಿಕ್ತೇಶ್ವರಾನಂದ ಶ್ರಿಗಳು ಹೇಳಿದ್ದಾರೆ.