

ಮಹಾರಾಷ್ಟ್ರ: ಆ.19ರಂದು ನಡೆದ ಘಟನೆಯ ವಿಡಿಯೋ ಇಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. 24 ವರ್ಷದ ಓಲಾ ಕ್ಯಾಬ್ ಚಾಲಕನನ್ನು ಮನಬಂದಂತೆ ಥಳಿಸಿದ ದುಬಾರಿ ಮೌಲ್ಯದ ಆಡಿ ಕಾರಿನ ಮಾಲೀಕ, ಅಸಹಾಯಕ ಡ್ರೈವರ್ನ ಎತ್ತಿ ಬಿಸಾಡಿರುವ ಘಟನೆ ನೋಡುಗರನ್ನು ಭಾರೀ ಆತಂಕಕ್ಕೆ ದೂಡಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನ ಮೇಲೆ ಹಲ್ಲೆಗೈದ ವ್ಯಕ್ತಿಯ ವಿರುದ್ಧ ಇದೀಗ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಗಣೇಶೋತ್ಸವ ಅರ್ಥಪೂರ್ಣ ಆಚರಣೆಗೆ ಸಲಹೆ
ಅಸಲಿಗೆ ಆ.19ರಂದು ನಡೆದಿದ್ದೇನು?
ಮಹಾರಾಷ್ಟ್ರದ ಘಾಟ್ಕೋಪರ್ ಬಳಿ ಓಲಾ ಕ್ಯಾಬ್ ಚಾಲಕನೊಬ್ಬ ಆಡಿ ಕಾರಿನ ಹಿಂದೆಯೇ ತನ್ನ ಕಾರನ್ನು ಚಲಾಯಿಸಿಕೊಂಡು ಕಟ್ಟದ ಸಂಕೀರ್ಣದೊಳಗೆ ಬಂದಿದ್ದಾನೆ. ಈ ವೇಳೆ ಆಡಿ ಕಾರು ಮಾಲೀಕ ತನ್ನ ವಾಹನವನ್ನು ನಿಲ್ಲಿಸಿದ್ದಾನೆ. ಆಡಿ ಹಿಂದೆಯೇ ಬಂದ ಕ್ಯಾಬ್ ಚಾಲಕ ಅಂತರ ಕಾಯ್ದುಕೊಳ್ಳದೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕುಪಿತಗೊಂಡ ದೊಡ್ಡ ವ್ಯಕ್ತಿ ಏಕಾಏಕಿ ಅಮಾಯಕ ಚಾಲಕನ ಮೇಲೆ ತನ್ನ ಕ್ರೌರ್ಯ ಮೆರೆದಿದ್ದಾನೆ.
ಸದ್ಯ ವಿಡಿಯೋ ಜಾಲತಾಣಗಳಲ್ಲಿ ಹಂಚಿಕೆಯಾದ ಕ್ಷಣಮಾತ್ರದಲ್ಲಿ ಭಾರೀ ವೈರಲ್ ಆಗಿದ್ದು, ಅಹಂಕಾರ ತುಂಬಿದ ಆಡಿ ಮಾಲೀಕನಿಗೆ ನೆಟ್ಟಿಗರು ಹಿಡಿಶಾಪ ಹಾಕಿದ್ದಾರೆ. ಘಟನೆಯ ವಿಡಿಯೋವನ್ನು ಪರಿಶೀಲಿಸಿರುವ ಪೊಲೀಸರು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 117 (ಸ್ವಯಂಪ್ರೇರಿತವಾಗಿ ಘೋರವಾದ ಗಾಯವನ್ನುಂಟುಮಾಡುವುದು), 351 (ಅಪರಾಧ ಬೆದರಿಕೆ), ಮತ್ತು 352ರ (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿ ಎಫ್ಐಆರ್ ದಾಖಲಿಸಿದ್ದಾರೆ,(ಏಜೆನ್ಸೀಸ್).