ಜಾಗತಿಕ ವರ್ಚಸ್ಸು ಮರಳಿ ಪಡೆಯುವ ಯತ್ನ

Bide 11
Published on

| ಎನ್.ಪಾರ್ಥಸಾರಥಿ ಮಾಜಿ ರಾಯಭಾರಿ, ಜಾಗತಿಕ ವಿದ್ಯಮಾನಗಳ ವಿಶ್ಲೇಷಕರು

ಅಮೆರಿಕದ ಫಲಿತಾಂಶ ಹಲವು ಸ್ಪಷ್ಟ ಸಂದೇಶಗಳನ್ನು ರವಾನಿಸಿದೆ. ಡೊನಾಲ್ಡ್ ಟ್ರಂಪ್ ಅವರ ವಿಭಜನಕಾರಿ ನೀತಿ ಮತ್ತು ವಿವೇಚನಾರಹಿತ ಹೇಳಿಕೆಗಳು ಅಮೆರಿಕದ ವರ್ಚಸ್ಸಿಗೆ ಪೆಟ್ಟು ನೀಡಿರುವುದು ಹೌದು. ಎಲ್ಲ ದೇಶಗಳ ವಾಣಿಜ್ಯ

ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಹೊರಟಿದ್ದು ಮತ್ತು ಎಲ್ಲವನ್ನೂ ವಾಣಿಜ್ಯ ದೃಷ್ಟಿಯಿಂದಲೇ ನೋಡುತ್ತಿದ್ದ ಅವರ ನೀತಿಯೂ ಮಾರಕವಾಗಿ ಪರಿಣಮಿಸಿದೆ. ಭಾರತವನ್ನು ‘ಆಪ್ತಮಿತ್ರ’ ಎಂದೆಲ್ಲ ಹೊಗಳುತ್ತಿದ್ದ ಟ್ರಂಪ್ ಅದರ ಬೆನ್ನಲ್ಲೇ ತೆರಿಗೆ ವಿಧಿಸುತ್ತಿದ್ದರು! ಇಂಥ ವಿಚಿತ್ರ, ದ್ವಂದ್ವ ನಿಲುವುಗಳು ಅಮೆರಿಕಕ್ಕೆ ಹಾನಿ ಮಾಡಿದ್ದವು. ಹಾಗಾದರೆ, ಜೋ ಬೈಡೆನ್ ಆಡಳಿತದಲ್ಲಿ ಅಮೆರಿಕ ತನ್ನ ವರ್ಚಸ್ಸನ್ನು ಮರಳಿ ಪಡೆಯುತ್ತದೆಯೇ ಎಂಬ ಪ್ರಶ್ನೆಗೆ ‘ಹೌದು’ ಎಂಬ ಉತ್ತರ ನೀಡಬಹುದು. ದ್ವಂದ್ವ ನಿಲುವು ನಿಂತು ಸುಸ್ಥಿರ ನೀತಿ ಬರಲಿದೆ.

ಬೈಡೆನ್ ಆಡಳಿತದಲ್ಲಿ ಏಷ್ಯಾ ಅಥವಾ ಭಾರತದ ಪ್ರಾಮುಖ್ಯ ಕಡಿಮೆ ಆಗುವುದಿಲ್ಲ. ವಿಶ್ವಶಾಂತಿ ಸ್ಥಾಪನೆಯಲ್ಲಿ ಏಷ್ಯಾದ ಪಾತ್ರ ಪ್ರಮುಖ ಎಂಬುದನ್ನು ಡೆಮಾಕ್ರಟಿಗರು ಅರಿತಿದ್ದಾರೆ. ಕಳೆದ 20 ವರ್ಷಗಳಲ್ಲಿ ಅಮೆರಿಕ-ಭಾರತ ಸಂಬಂಧ, ಸ್ನೇಹ ದೃಢಗೊಂಡಿದ್ದು, ಅದು ಹೊಸ ಎತ್ತರಕ್ಕೆ ಏರಲಿದೆ. ಮಿಲಿಟರಿ ಸಹಕಾರ ಸೇರಿ ಹಲವು ವಲಯಗಳಲ್ಲಿ ಮೈತ್ರಿ ಮುಂದುವರಿಯಲಿದೆ. ಬರಾಕ್ ಒಬಾಮ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಬೈಡೆನ್ ಭಾರತದ ಆಳಅಗಲವನ್ನು ಅರ್ಥಮಾಡಿಕೊಂಡಿದ್ದಾರೆ. ಹಾಗಾಗಿ, ಅಮೆರಿಕದ ವಿದೇಶಾಂಗ ನೀತಿ ಬೈಡೆನ್ ಅವಧಿಯಲ್ಲಿ ಬದಲಾಗುವುದಿಲ್ಲ. ಇನ್ನು, ಚೀನಾ ತನ್ನ ನೀತಿ, ನಿರ್ಧಾರಗಳನ್ನು ಜಗತ್ತಿನ ಮೇಲೆ ಹೇರಲು ಹೊರಟಿದೆ ಎಂಬುದನ್ನು ಡೆಮಾಕ್ರಟಿಗರೂ ಅರಿತುಕೊಂಡಿದ್ದಾರೆ. ಚೀನಾದ ವಿಸ್ತರಣಾವಾದದ ನೀತಿಗೆ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಪಾರಮ್ಯ ಸಾಧಿಸುವ ಹಪಾಹಪಿಗೆ ಹೊಸ ಸರ್ಕಾರವೂ ಕಡಿವಾಣ ಹಾಕಲಿದೆ.

ಬರಾಕ್ ಒಬಾಮ ನೇತೃತ್ವದಲ್ಲಿ ಅಮೆರಿಕ 2008ರಲ್ಲಿ ಟ್ರಾನ್ಸ್-ಪೆಸಿಫಿಕ್ ಸಹಭಾಗಿತ್ವ (ಟಿಪಿಪಿ) ಒಡಂಬಡಿಕೆ ಮಾಡಿಕೊಂಡಾಗ ಭಾರತ ಮತ್ತು ಚೀನಾವನ್ನು ಹೊರಗಿಡಲಾಯಿತು. 2017 ಜನವರಿಯಲ್ಲಿ ಟಿಪಿಪಿಯಿಂದ ಅಮೆರಿಕ ಹಿಂದೆ ಸರಿಯುವ ಆದೇಶಕ್ಕೆ ಟ್ರಂಪ್ ಸಹಿ ಹಾಕಿದರು. ಹೊಸ ಸರ್ಕಾರ ಈ ಒಡಂಬಡಿಕೆ ಮರುಪರಿಷ್ಕರಿಸುವ ಸಾಧ್ಯತೆ ಇದ್ದು, ಭಾರತ ಇದರಲ್ಲಿ ಸೇರಬೇಕೆ, ಬೇಡವೆ ಎಂಬ ಬಗ್ಗೆ ಚರ್ಚೆ ಅಗತ್ಯ. ಇರಾನ್ ಮೇಲೆ ಅಮೆರಿಕ ನಿರ್ಬಂಧ ಹೇರಿರುವುದು ತನ್ನ ಹಿತಾಸಕ್ತಿಗಳಿಗಾಗಿ. ಇರಾನ್​ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದ್ದ ಭಾರತಕ್ಕೆ ಇದರಿಂದ ಹಾನಿಯಾಗಿದೆ. ಇರಾನ್ ಮೇಲಿನ ನಿರ್ಬಂಧಗಳು ಸಡಿಲಗೊಳ್ಳುವ ಸಾಧ್ಯತೆ ಇದೆ.

ಟ್ರಂಪ್ ಅವಧಿಯಲ್ಲಿ ಹಲವು ಅಂತಾರಾಷ್ಟ್ರೀಯ ಒಪ್ಪಂದಗಳಿಂದ ಅಮೆರಿಕ ಹೊರಬಂದಿತ್ತು. ಮುಖ್ಯವಾಗಿ, ಹವಾಮಾನ ಬದಲಾವಣೆಗೆ ಸಂಬಂಧಪಟ್ಟ ಪ್ಯಾರಿಸ್ ಒಪ್ಪಂದ ಮರುಸ್ಥಾಪಿಸುವ ಸುಳಿವನ್ನು ಬೈಡೆನ್ ಈಗಾಗಲೇ ನೀಡಿದ್ದಾರೆ. ಅಂದರೆ, ಟ್ರಂಪ್ ಅವಸರದ ಮತ್ತು ವಿವೇಚನಾರಹಿತ ತೀರ್ವನಗಳಿಂದ ಎಲ್ಲೆಲ್ಲಿ ಹಿಂದಡಿ ಇಟ್ಟಿದ್ದರೋ, ಅಲ್ಲಿ ಮುಂದಡಿ ಇಟ್ಟು, ಎಲ್ಲವನ್ನೂ ಮುಂಚೆಯಂತೆ ಮರುಸ್ಥಾಪಿಸುವ ಪ್ರಯತ್ನವನ್ನು ಹೊಸ ಸರ್ಕಾರ ಮಾಡುವ ನಿರೀಕ್ಷೆ ಇದೆ.

ಭಾರತೀಯ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಿ ಆಯ್ಕೆ ಆಗಿರುವುದರಿಂದ ಭಾರತಕ್ಕೆ ಅನುಕೂಲವಾಗಲಿದೆಯೇ ಎಂಬ ಚರ್ಚೆ ನಡೆಯುತ್ತಿದೆ. ಕಮಲಾ ಉಪಾಧ್ಯಕ್ಷೆ ಆಗಿರುವುದಕ್ಕೆ ಮತ್ತು ಮುಂದೊಂದು ದಿನ ಅವರು ಅಧ್ಯಕ್ಷರೂ ಆಗಬಹುದು ಎಂಬ ಸಾಧ್ಯತೆಯ ಬಗ್ಗೆ ಖಂಡಿತವಾಗಿಯೂ ಸಂತೋಷ ಪಡಬೇಕು ಮತ್ತು ಅದು ಅಷ್ಟಕ್ಕೇ ಸೀಮಿತವಾಗಬೇಕು. ಕಮಲಾ ಮೊದಲು ಅಮೆರಿಕನ್ನರು, ನಂತರ ಅಮೆರಿಕನ್ ಆಫ್ರಿಕನ್​ರು, ಆ ಬಳಿಕ ಭಾರತೀಯ ಮೂಲದವರು. ಆದ್ದರಿಂದ ಅವರಿಗೆ ಅಮೆರಿಕದ ಹಿತವೇ ಮುಖ್ಯವಾಗಿರುತ್ತದೆ. ಭಾರತದೊಂದಿಗೆ ಸ್ನೇಹಸಂಬಂಧ ವೃದ್ಧಿಯ ವಿಷಯ ಬಂದಾಗ ಅವರು ಇನ್ನಷ್ಟು ಉತ್ಸಾಹವನ್ನು ತೋರಬಹುದು ಅಷ್ಟೇ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net