

ಬೆಂಗಳೂರು: ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದು ಮೊಬೈಲ್ ಕಸೀದುಕೊಂಡು ಪರಾರಿಯಾಗುತ್ತಿದ್ದ ಖತರ್ನಾಕ್ ಕಳ್ಳನನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ.
ಪಾದರಾಯನಪುರ ನಿವಾಸಿ ನಬೀದ್ ಪಾಷಾ(೨೭) ಬಂಧಿತ. ಆರೋಪಿಯಿಂದ ೬.೮೦ ಲಕ್ಷ ರೂ. ಮೌಲ್ಯದ ೪೦ ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.
ಸೆ.೧೦ರಂದು ಬೆಳಗ್ಗೆ ೬.೫೦ರ ಸುಮಾರಿಗೆ ಕೆ.ಆರ್.ರಸ್ತೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಿಜನ್ ಎಂಬುವವವರು ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಡಿಯೊ ದ್ವಿಚಕ್ರ ವಾಹನದಲ್ಲಿ ಬಂದಿರುವ ಆರೋಪಿ ನಬೀದ್ ಪಾಷಾ, ಚಾಕು ತೆಗೆದು ಬಿಜನ್ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಲು ಮುಂದಾಗಿದ್ದಾನೆ. ಇದೇ ಸಮಯಕ್ಕೆ ಕಲಾಸಿಪಾಳ್ಯ ಪೊಲೀಸ್ ಠಾಣೆ ಕಾನ್‌ಸ್ಟೆಬಲ್ ಲಕ್ಷ್ಮಣ ರಾಥೋಡ್, ಬೀಟ್ ಕರ್ತವ್ಯ ಮುಗಿಸಿ ಅದೇ ಮಾರ್ಗವಾಗಿ ಬರುತ್ತಿದ್ದರು. ಆರೋಪಿ ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿರುವುದನ್ನು ನೋಡಿ ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಆರೋಪಿಯು ನಬೀದ್ ಚಾಕು ತೆಗೆದು ಲಕ್ಷ್ಮಣ ರಾಥೋಡ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆದರೂ ಬಿಡದೆ ಆರೋಪಿಯನ್ನು ನೆಲಕ್ಕೆ ಕೆಡವಿ ಹಿಡಿದಿದ್ದಾರೆ. ಅಷ್ಟರಲ್ಲಿ ಹೆಡ್‌ಕಾನ್‌ಸ್ಟೆಬಲ್ ನಾಗೇಶ್ ಸಹ ಅಲ್ಲಿಗೆ ಬಂದಿದ್ದಾರೆ. ಬಳಿಕ ಇಬ್ಬರೂ ಆರೋಪಿಯನ್ನು ಹಿಡಿದುಕೊಂಡಿದ್ದಾರೆ. ಪೊಲೀಸರಿಬ್ಬರು ಹಿಡಿದುಕೊಂಡ ತಕ್ಷಣ ಆರೋಪಿ ನಬೀದ್ ಜೋರಾಗಿ ಚೀರಾಡಿ ಜನರನ್ನು ಸೇರಿಸಲು ಯತ್ನಿಸಿದ್ದಾನೆ. ಸುಮ್ಮನೆ ಪೊಲೀಸರು ನನ್ನನ್ನು ಹಿಡಿದು ತೊಂದರೆ ನೀಡುತ್ತಿದ್ದಾರೆ ಎಂದು ಸಾರ್ವಜನಿಕರ ಸಹಾಯ ಪಡೆದು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಈತನ ನಾಟಕ ಅರಿತ ಪೊಲೀಸರು, ಈತ ಮೊಬೈಲ್ ಕಳ್ಳ. ಈಗಷ್ಟೇ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಹಲ್ಲೆಗೈದು ಮೊಬೈಲ್ ಕಿತ್ತುಕೊಂಡು ಬಂದಿದ್ದಾನೆ ಎಂದು ಹೇಳಿ ಆರೋಪಿಯ ಬಳಿ ಇದ್ದ ಮೊಬೈಲ್ ತೋರಿಸಿದ್ದಾರೆ. ಬಳಿಕ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ.
ಬಂಧಿತ ವೃತ್ತಿಪರ ಕಳ್ಳ:
ಆರೋಪಿ ನಬೀದ್ ಪಾಷಾ ವೃತ್ತಿಪರ ಕಳ್ಳನಾಗಿದ್ದು, ಈ ಹಿಂದೆ ನಗರದ ಕಾಟನ್‌ಪೇಟೆ, ಕಲಾಸಿಪಾಳ್ಯ, ವಿವಿ ಪುರಂ, ಉಪ್ಪಾರಪೇಟೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮೊಬೈಲ್ ಸುಲಿಗೆ, ದರೋಡೆ, ದ್ವಿಚಕ್ರ ವಾಹನ ಕಳವು ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ಆರೋಪಿಯು, ಜಾಮೀನು ಪಡೆದು ಹೊರಬಂದ ಬಳಿಕವೂ ತನ್ನ ಹಳೇ ಚಾಳಿ ಮುಂದುವರೆಸಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈತನ ಬಂಧಿಂದ ವಿ.ವಿ.ಪುರಂ ಠಾಣೆಯಲ್ಲಿ ದಾಖಲಾಗಿದ್ದ ಎರಡು ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.