

ಮಳವಳ್ಳಿ: ತಾಲೂಕಿನ ಚಿಕ್ಕಮಾಳಿಗೆ ಕೊಪ್ಪಲು ಗ್ರಾಮದಲ್ಲಿರುವ ಎರಡು ದೇವಸ್ಥಾನಗಳಲ್ಲಿ ಬುಧವಾರ ರಾತ್ರಿ ಕಳ್ಳತನಕ್ಕೆ ಯತ್ನಿಸುವುದರ ಜತೆಗೆ ಕಳ್ಳರು ದೇವಸ್ಥಾನದ ಗೋಡೆಯ ಮೇಲೆ ಅನ್ಯ ಧರ್ಮವೊಂದರ ಬರಹ ಬರೆದು ಪರಾರಿಯಾಗಿದ್ದಾರೆ.
ಗ್ರಾಮಕ್ಕೆ ಹೊಂದಿಕೊಂಡಂತಿರುವ ಹಾಗೂ ಕಿರುಗಾವಲು-ಕಲ್ಕುಣಿ ಮುಖ್ಯರಸ್ತೆಯ ಬದಿಯಲ್ಲಿ ಇರುವ ಏಳೂರಮ್ಮ ಹಾಗೂ ದಂಡಿನ ಮಾರಮ್ಮನ ದೇವಸ್ಥಾನಗಳಲ್ಲಿ ಕೃತ್ಯ ನಡೆದಿದ್ದು, ಎರಡೂ ದೇವಸ್ಥಾನಗಳ ಮುಖ್ಯದ್ವಾರದ ಬಾಗಿಲು ಬೀಗ ಹೊಡೆದು ಒಳ ನುಸುಳಲಾಗಿದೆ. ದಂಡಿನ ಮಾರಮ್ಮ ದೇವಸ್ಥಾನದಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳು ಇರಲಿಲ್ಲ ಎನ್ನಲಾಗಿದ್ದು, ಏಳೂರಮ್ಮ ದೇವಸ್ಥಾನದಲ್ಲಿ ಹುಂಡಿಯಲ್ಲಿದ್ದ ಚಿಲ್ಲರೆ ಹಣವನ್ನು ದೋಚಲಾಗಿದೆ. ಆದರೆ ಗರ್ಭಗುಡಿಯಲ್ಲಿರುವ ದೇವಿಯ ವಿಗ್ರಹದ ಮೇಲಿದ್ದ ಚಿನ್ನದ ಮಾಂಗಲ್ಯವನ್ನು ಕಳ್ಳರು ಮುಟ್ಟಿಲ್ಲ. ಕಳ್ಳತನ ಮಾಡಿದ ನಂತರ ದೇವಸ್ಥಾನದ ಪ್ರಾಂಗಣ ಹಾಗೂ ಮುಂಭಾಗದ ಗೋಡೆಯ ಮೇಲೆ ಅರ್ಧ ಚಂದ್ರಾಕೃತಿ ಮತ್ತು ಸ್ಟಾರ್ ಚಿಹ್ನೆಯ ಜತೆಗೆ 786 ಎಂಬ ಬರಹವನ್ನು ಬರೆದು ಹೋಗಿದ್ದಾರೆ.
ಗುರುವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಸ್ಥರು ದೇವಸ್ಥಾನದ ಮುಂದೆ ಜಮಾಯಿಸಿದ್ದು, ಇದು ದುರುದ್ದೇಶದಿಂದ ಕಿಡಿಗೇಡಿಗಳು ಮಾಡಿರುವ ಕೃತ್ಯವಾಗಿದೆ. ಕೋಮು ಗಲಭೆ ಸೃಷ್ಟಿಸಲು ನಡೆಸಿರುವ ಹುನ್ನಾರವೆಂಬ ಅನುಮಾನಗಳು ಕಾಡುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.