

ಬೆಂಗಳೂರು: ಕೌಟುಂಬಿಕ ಕಲಹದಿಂದ ಬೇಸತ್ತ ಟೆಕ್ಕಿಯೊಬ್ಬ ರಾಜಭವನ ಮುಂಭಾಗ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಹೆಬ್ಬಾಳ ನಿವಾಸಿ ಜುಹೇಲ್ ಅಹ್ಮದ್(೨೬) ಆತ್ಮಹತ್ಯೆಗೆ ಯತ್ನಿಸಿದವನು. ಭಾನುವಾರ ಸಂಜೆ ೪.೩೦ ಕ್ಕೆ ರಾಜಭವನ ಮುಂಭಾಗ ಘಟನೆ ನಡೆದಿದ್ದು, ಸ್ಥಳದಲ್ಲಿದ್ದ ಪತ್ರಕರ್ತರು ಪೆಟ್ರೋಲ್ ಬಾಟಲ್ ಅನ್ನು ಕಸಿದುಕೊಂಡು ಜುಹೇಲ್ ಅಹ್ಮದ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಭಾನುವಾರ ಸಂಜೆ ೪.೩೦ ಕ್ಕೆ ರಾಜಭವನದ ಬಳಿ ಬಂದಿದ್ದ ಜುಹೇಲ್ ಅಹ್ಮದ್, ತನ್ನ ಬ್ಯಾಗ್‌ನಲ್ಲಿದ್ದ ಪೆಟ್ರೋಲ್ ಬಾಟಲಿ ತೆಗೆದು ಮೈಮೇಲೆ ಸುರಿದುಕೊಂಡಿದ್ದಾನೆ. ಅದೇ ವೇಳೆ ಸ್ಥಳದಲ್ಲಿ ಪತ್ರಕರ್ತರು ಜುಹೇಲ್‌ನನ್ನು ಹಿಡಿದು ಪೆಟ್ರೋಲ್ ಬಾಟಲ್ ಕಸಿದುಕೊಂಡು ಅನಾಹುತ ತಪ್ಪಿಸಿದ್ದಾರೆ. ಈ ವೇಳೆ ಜುಹೇಲ್ ನನಗೆ ನ್ಯಾಯಬೇಕು. ಪೊಲೀಸರು ನನ್ನ ಪತ್ನಿ ಪರ ಇದ್ದಾರೆ ಎಂದು ಗೋಳಾಡಿದ್ದಾನೆ. ಅಲ್ಲದೆ, ಅದೇ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಹಾಗೂ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವಿಧಾನಸೌಧ ಠಾಣೆ ಪೊಲೀಸರು ಜುಹೇಲ್‌ನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್‌ಟಾವೇರ್ ಇಂಜಿನಿಯರ್ ಆಗಿರುವ ಜುಹೇಲ್ ಅಹ್ಮದ್, ತಮಿಳುನಾಡಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ಹೆಬ್ಬಾಳದಲ್ಲಿರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ೨೦೨೪ರ ನವೆಂಬರ್ ೧೪ರಂದು ಚಿಕ್ಕಬಳ್ಳಾಪುರ ಮೂಲದ ಜವೇರಿಯಾ ಮುಸ್ಕಾನ್ ಎಂಬಾಕೆಯನ್ನು ಮದುವೆಯಾಗಿದ್ದು, ಕೆಲ ದಿನಗಳ ಬಳಿಕ ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಗಲಾಟೆ ನಡೆದಿದೆ. ಅಲ್ಲದೆ, ಆಕೆಗೆ ಆರೋಗ್ಯ ಸಮಸ್ಯೆ ಇದೆ. ಅದಕ್ಕಾಗಿ ಹತ್ತಾರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೂ ಆಕೆ ಕ್ಷುಲ್ಲಕ ಕಾರಣಕ್ಕೆ ವಿಚ್ಛೇಧನ ಕೊಡುವಂತೆ ಒತ್ತಡ ಹಾಕುತ್ತಿದ್ದಳು. ಅದಕ್ಕೆ ನಾನು ಒಪ್ಪದ್ದಿದ್ದಾಗ, ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುತ್ತೇನೆ. ಸಾಯಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಳು ಎಂದು ಆರೋಪಿಸಿದ್ದಾನೆ.
ಮತ್ತೊಂದೆಡೆ ಸ್ಥಳೀಯ ಗೂಂಡಾಗಳು, ಪತ್ನಿ ಮತ್ತು ಆಕೆಯ ಕುಟುಂಬದವರ ಪರವಾಗಿಯೇ ಇದ್ದಾರೆ. ಅವರ ಸಹಕಾರದಿಂದಲೇ ಆಕೆ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಚಿಕ್ಕಬಳ್ಳಾಪುರದ ಠಾಣೆಯೊಂದರಲ್ಲಿ ದೂರು ನೀಡಿದ್ದರು. ಆಗ ಪೊಲೀಸರು ಒಂದೆರಡು ಬಾರಿ ಜುಹೇಲ್‌ನನ್ನು ವಿಚಾರಣೆಗೂ ಕರೆಸಿ, ಎಚ್ಚರಿಕೆ ನೀಡಿದ್ದರು. ಈ ಮಧ್ಯೆ ಪತ್ನಿ ಬಾಟಲಿಯಲ್ಲಿ ಔಷಧಿಯೊಂದನ್ನು ನೀಡಿದ್ದಳು. ಅದನ್ನು ಕುಡಿದು ನಾನು ಅಸ್ವಸ್ಥಗೊಂಡಿದ್ದೆ. ಬಳಿಕ ಚಿಕ್ಕಬಳ್ಳಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಬೆಂಗಳೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾಗಿದ್ದೇನೆ. ಈ ಬಗ್ಗೆ ಚಿಕ್ಕಬಳ್ಳಾಪುರ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಲ್ಲ. ನಾನು ಮತ್ತು ನನ್ನ ಕುಟುಂಬ ಜೀವ ಭಯದಲ್ಲಿದೆ. ರಕ್ಷಣೆ ಕೊಡುವಂತೆ ಕೇಳಿದರೂ ಚಿಕ್ಕಬಳ್ಳಾಪುರ ಪೊಲೀಸರು ಸ್ಪಂದಿಸುತ್ತಿಲ್ಲ ಎಂದೆಲ್ಲ ಪತ್ನಿ ಮತ್ತು ಆಕೆಯ ಕುಟುಂಬದ ವಿರುದ್ಧ ಜುಹೇಲ್ ಬಳಿಯಿದ್ದ ಡೆತ್‌ನೋಟ್ ಮಾದರಿಯ ಹತ್ತಾರು ಪುಟಗಳಲ್ಲಿ ಉಲ್ಲೇಖವಿತ್ತು.