14 ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನ

Crime Logo
Published on

ಬೆಂಗಳೂರು: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕನೊಬ್ಬ ಅಪಾರ್ಟ್‌ಮೆಂಟಿನ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಮನವರ್ತ ಕಾವಲು ಶೊಭಾ ಹಿಲ್ ವ್ಯೆವ್ ಅಪಾರ್ಟ್‌ಮೆಂಟ್ ನಿವಾಸಿ ಸಂಜಿತ್(೨೫) ಆತ್ಮಹತ್ಯೆಗೆ ಯತ್ನಿಸಿದ ಯುವಕ.ಸೋಮವಾರ ಸಂಜೆ ೭.೧೫ ಕ್ಕೆ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಸಂಜಿತ್‌ಗೆ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೋಭಾ ಹಿಲ್ ವ್ಯೆವ್ ಅಪಾರ್ಟ್‌ಮೆಂಟ್‌ನ ೮ನೇ ಮಹಡಿಯಲ್ಲಿ ಸಂಜಿತ್ ಪಾಲಕರ ಜತೆಗೆ ನೆಲೆಸಿದ್ದ. ಸಂಜಿತ್ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಸೋಮವಾರ ಸಂಜೆ ಮನೆಯಲ್ಲೇ ಇದ್ದ ಸಂಜಿತ್ ೧೮ನೇ ಮಹಡಿಗೆ ತೆರಳಿ ಏಕಾಏಕಿ ಕೆಳಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಹಾರಿ ಬಾಳೆಗಿಡದ ಮೇಲೆ ಬಿದ್ದ:
ಅಪಾರ್ಟ್‌ಮೆಂಟಿನ ೧೪ನೇ ಮಹಡಿಯಿಂದ ಕೆಳಗೆ ಜಿಗಿದಾಗ ಸಂಜಿತ್ ಬಾಳೆಗಿಡಗಳ ಮೇಲೆ ಬಿದ್ದು ಬಳಿಕ ನೆಲಕ್ಕೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾನೆ. ನೇರವಾಗಿ ನೆಲಕ್ಕೆ ಬಿದ್ದಿದ್ದರೆ ಸ್ಥಳದಲ್ಲೇ ಮೃತಪಡುವ ಸಾಧ್ಯತೆ ಇತ್ತು. ಏನೋ ಬಿದ್ದ ಶಬ್ಧ ಕೇಳಿ ಅಪಾರ್ಟ್‌ಮೆಂಟ್ ನಿವಾಸಿಗಳು ಹೊರಗೆ ಬಂದು ನೋಡಿದಾಗ, ಸಂಜಿತ್ ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಪಾಲಕರು ಗಾಯಾಳು ಸಂಜಿತ್‌ನನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಇತ್ತೀಚೆಗೆ ಸಂಜಿತ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎಂದು ತಿಳಿದು ಬಂದಿದೆ. ಆತ್ಮಹತ್ಯೆ ಯತ್ನಿಸಲು ನಿಖರ ಕಾರಣ ಇಳಿದು ಬಂದಿಲ್ಲ. ಪಾಲಕರು ಮಗನಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಹೀಗಾಗಿ ಕೆಲ ಸಮಯದ ಬಳಿಕ ಅವರಿಂದ ಮಾಹಿತಿ ಪಡೆಯಲಾಗುವುದು. ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net