

ಬೆಂಗಳೂರು: ಫ್ಲ್ಯಾಟ್ ಬರೆದುಕೊಡುವಂತೆ ಪತ್ನಿಗೆ ಕಿರುಕುಳ ಕೊಟ್ಟು ಪತ್ನಿ ಕೊಲೆಗೆ ಯತ್ನಿಸಿದ ಪತಿ ಮತ್ತು ಆತನ ಸಹೋದರಿಗೆ ತಲಾ 2 ವರ್ಷ ಜೈಲು ಶಿಕ್ಷೆ ವಿಧಿಸಿ 71ನೇ ಸೆಷನ್ ನ್ಯಾಯಾಲಯ ತೀರ್ಪು ನೀಡಿದೆ.
ದೆಹಲಿ ಮೂಲದ ಸಂಜೀವ್‌ಕುಮಾರ್ ಮತ್ತು ಕಾಂಚನ ಅಪರಾಧಿಗಳು. ನೊಂದ ಮಹಿಳೆಗೆ 1.50 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಧೀಶ ಬಾಲಚಂದ್ರ ಭಟ್ ಸೂಚಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಆರ್. ಸತ್ಯವತಿ ವಾದ ಮಂಡಿಸಿದ್ದರು.
ದೆಹಲಿಯ ಚತ್ತರ್‌ಪುರ್ ಮೂಲದ ಸಂಜೀವ್ ಮತ್ತು ಅನುಸಿಂಗ್ ಪ್ರೀತಿಸಿ 2008ರಲ್ಲಿ ಮದುವೆಯಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ಸಂಜೀವ್ ತಂಗಿ ಕಾಂಚಾನ ಸಹ ಜತೆಯಲ್ಲಿ ಬಂದಿದ್ದಳು. ದೆಹಲಿಯಲ್ಲಿ ಇರುವ ಫ್ಲ್ಯಾಟ್ ಅನ್ನು ತನ್ನ ಹೆಸರಿಗೆ ಬರೆದುಕೊಂಡುವಂತೆ ಪತ್ನಿಗೆ ಸಂಜೀವ್ ಕಿರುಕುಳ ಕೊಡುತ್ತಿದ್ದ. ತನ್ನ ತಂಗಿಯೊಂದಿಗೆ ಸೇರಿ 2013ರ ಮೇನಲ್ಲಿ ಕತ್ತು ಹಿಸುಕಿ ಮತ್ತು ಗೋಡೆಗೆ ತಲೆಯನ್ನು ಬಡಿದು ಕೊಲೆಗೆ ಯತ್ನಿಸಿದ್ದರು.
ಈ ಬಗ್ಗೆ ಮೈಕೋ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿ ಸಂಜೀವ್ ಮತ್ತು ಕಾಂಚನನ್ನು ಬಂಧಿಸಿ ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.