

S Jaishankar: ಖಲಿಸ್ತಾನ್ ಪ್ರತ್ಯೇಕತಾವಾದಿ ಸಂಘಟನೆಯ ಸದಸ್ಯರು ವಿದೇಶಾಂಗ ಸಚಿವ ಜೈಶಂಕರ್ ಅವರ ವಾಹನದ ಮೇಲೆ ದಾಳಿ ಮಾಡಲು ಪ್ರಯತ್ನಿಸಿರುವ ಆಘಾತಕಾರಿ ಘಟನೆ ನಿನ್ನೆ (ಮಾ.05) ಸಂಜೆ ಲಂಡನ್ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಈ ಸಂಬಂಧ ಬಹಿರಂಗವಾಗಿರುವ ವಿಡಿಯೋದಲ್ಲಿ, ಅಪರಿಚಿತ ವ್ಯಕ್ತಿಯೊಬ್ಬ ಸಚಿವರ ಬೆಂಗಾವಲು ವಾಹನದ ಮುಂದೆ ಬಂದು ಭಾರತದ ಧ್ವಜವನ್ನು ಹರಿದು, ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಣಬಹುದು. ಆದರೆ, ಕೆಲವೇ ಕ್ಷಣಗಳಲ್ಲಿ, ಸ್ಥಳಕ್ಕೆ ಬಂದ ಪೊಲೀಸರು ಧ್ವಜ ಹರಿದ ವ್ಯಕ್ತಿ ಮತ್ತು ಇತರ ಪ್ರತ್ಯೇಕವಾದಿಗಳನ್ನು ಅಲ್ಲಿಂದ ಕರೆದುಕೊಂಡು ಹೋದರು.
ಲಂಡನ್‌ನ ಚಾಥಮ್ ಹೌಸ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಮುಗಿಸಿ ಜೈಶಂಕರ್ ಅವರು ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ.
ಇನ್ನು ಜೈಶಂಕರ್ ಅವರು ಭಾಗವಹಿಸಿದ್ದ ಕಾರ್ಯಕ್ರಮದ ಸ್ಥಳದ ಹೊರಗೂ ಖಲಿಸ್ತಾನಿ ಪ್ರತೇಕವಾದಿಗಳು ಪ್ರತಿಭಟನೆ ನಡೆಸುತ್ತಿರುವುದನ್ನು ತೋರಿಸುವ ಮತ್ತೊಂದು ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಈ ದೃಶ್ಯಾವಳಿಯಲ್ಲಿ ಕೆಲ ಪ್ರತ್ಯೇಕವಾದಿಗಳು ಧ್ವಜಗಳನ್ನು ಬೀಸುತ್ತಾ ಮತ್ತು ಖಲಿಸ್ತಾನಿ ಪರ ಘೋಷಣೆಗಳನ್ನು ಕೂಗುತ್ತಿರುವುದನ್ನು ರೆಕಾರ್ಡ್ ಮಾಡಲಾಗಿದೆ.
ಅಂದಹಾಗೆ ಜೈಶಂಕರ್ ಅವರು ಐದು ದಿನಗಳ ಅಧಿಕೃತ ಭೇಟಿಗಾಗಿ ಮಾರ್ಚ್ 4 ರಂದು ಲಂಡನ್‌ಗೆ ಭೇಟಿ ನೀಡಿದ್ದಾರೆ. ಈ ಘಟನೆಗೂ ಮುನ್ನ ಜೈಶಂಕರ್ ಅವರು ಚೆವೆನಿಂಗ್ ಹೌಸ್‌ನಲ್ಲಿ ಯುಕೆ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಅವರೊಂದಿಗೆ ಕಾರ್ಯತಂತ್ರದ ಸಮನ್ವಯ, ರಾಜಕೀಯ ಸಹಕಾರ, ವ್ಯಾಪಾರ, ಶಿಕ್ಷಣ, ತಂತ್ರಜ್ಞಾನ ಮುಂತಾದ ವಿಚಾರಗಳ ಬಗ್ಗೆ ವ್ಯಾಪಕ ಚರ್ಚೆಗಳನ್ನು ನಡೆಸಿದರು.
ಚಾಥಮ್ ಹೌಸ್‌ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ಪಾಕಿಸ್ತಾನದೊಂದಿಗಿನ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೆರವನ್ನು ಬಳಸಿಕೊಳ್ಳಬಹುದೇ ಎಂದು ಎಸ್. ಜೈಶಂಕರ್ ಅವರನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಜೈಶಂಕರ್, ಕಾಶ್ಮೀರದ ವಿಚಾರದಲ್ಲಿ ಭಾರತದ ವಿಧಾನವನ್ನು ದೃಢವಾಗಿ ಸಮರ್ಥಿಸಿಕೊಂಡರು.
ಮೂರನೇ ವ್ಯಕ್ತಿಯ ಹಸ್ತಕ್ಷೇಪದ ಅಗತ್ಯವನ್ನು ತಿರಸ್ಕರಿಸಿದರು. 370ನೇ ವಿಧಿಯನ್ನು ರದ್ದುಪಡಿಸುವುದು ಸೇರಿದಂತೆ ಕಾಶ್ಮೀರದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಹೆಚ್ಚಿನ ಮತದಾನದ ಪ್ರಮಾಣ ಸೇರಿದಂತೆ ಪರಿಸ್ಥಿತಿಯನ್ನು ಪರಿಹರಿಸಲು ಭಾರತ ಈಗಾಗಲೇ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು. ಆದಾಗ್ಯೂ, ಸಮಸ್ಯೆಯ ಬಗೆಹರಿಯದ ಭಾಗವು ಭಾರತದ ನಿಯಂತ್ರಣಕ್ಕೂ ಮೀರಿದೆ ಎಂದು ಒತ್ತಿ ಹೇಳಿದರು.
ನಾವು ಕಾಯುತ್ತಿರುವ ಭಾಗವೆಂದರೆ ಪಾಕಿಸ್ತಾನದ ಅಕ್ರಮ ಆಕ್ರಮಣದಲ್ಲಿರುವ ಕಾಶ್ಮೀರದ ಕದ್ದ ಭಾಗದ ಮರಳುವಿಕೆ ಎಂದು ನಾನು ಭಾವಿಸುತ್ತೇನೆ. ಅದು ಪೂರ್ಣಗೊಂಡಾಗ, ಕಾಶ್ಮೀರದ ಸಮಸ್ಯೆ ಬಗೆಹರಿಯುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಜೈಶಂಕರ್ ಹೇಳಿದರು. (ಏಜೆನ್ಸೀಸ್)