

Gautam Gambhir : ಟೀಮ್ ಇಂಡಿಯಾ ಸತತ ಗೆಲುವುಗಳೊಂದಿಗೆ 2025ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ತಲುಪಿದೆ. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ತಂಡ ಅಂತಿಮ ಹಣಾಹಣಿಗೆ ರೆಡಿಯಾಗುತ್ತಿದೆ. ಫೈನಲ್‌ನಲ್ಲಿ ರೋಹಿತ್ ಶರ್ಮ ಪಡೆ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಅಂದಹಾಗೆ ಚಾಂಪಿಯನ್ಸ್ ಟ್ರೋಫಿಯ ಎಲ್ಲ ಪಂದ್ಯಗಳನ್ನು ಭಾರತ ತಂಡ ದುಬೈನಲ್ಲಿ ಆಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗರು ಕೂಡ ಈಗಾಗಲೇ ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಟೀಮ್ ಇಂಡಿಯಾವನ್ನು ಟೀಕಿಸಿದ್ದಾರೆ.
ಟೀಮ್ ಇಂಡಿಯಾ ಎಲ್ಲಿಯೂ ಪ್ರಯಾಣಿಸದೇ ಒಂದೇ ಸ್ಥಳದಲ್ಲಿ ಇರುವುದು ಮತ್ತು ಒಂದೇ ಸ್ಥಳದಲ್ಲಿ ಆಡುತ್ತಿರುವುದರಿಂದ ಹೆಚ್ಚುವರಿ ಪ್ರಯೋಜನವನ್ನು ಪಡೆಯುತ್ತಿದೆ ಎಂದು ಅನೇಕರು ಆರೋಪ ಮಾಡಿದ್ದಾರೆ. ಸೆಮಿಫೈನಲ್‌ನಲ್ಲಿ ಆಸೀಸ್ ವಿರುದ್ಧದ ಗೆಲುವಿನ ನಂತರ ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್, ಇದೇ ಮೊದಲ ಬಾರಿಗೆ ಇಂತಹ ಆರೋಪಕ್ಕೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ದುಬೈ ಒಂದು ಸ್ಥಳವಷ್ಟೇ, ಇದೇನು ನಮಗೆ ತವರು ಮೈದಾನವಲ್ಲ. ಇತರ ತಂಡಗಳಂತೆ ನಮ್ಮ ತಂಡಕ್ಕೂ ಎಲ್ಲವೂ ಹೊಸದು ಎಂದರು. ಅಲ್ಲದೆ, 2025ರ ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯದಿಂದಲೂ ನಾವು ಯೋಜನೆಯ ಪ್ರಕಾರ ಆಡುತ್ತಿದ್ದೇವೆ. ಅಂತಿಮ ತಂಡದಲ್ಲಿ ಇಬ್ಬರು ತಜ್ಞ ಸ್ಪಿನ್ನರ್‌ಗಳನ್ನು ಸೇರಿಸಿಕೊಳ್ಳಬೇಕೆಂದು ನಾವು ಭಾವಿಸಿದ್ದೆವು ಮತ್ತು ಅದಕ್ಕೆ ಅನುಗುಣವಾಗಿ ನಾವು ಮುಂದುವರಿಯುತ್ತಿದ್ದೇವೆ ಎಂದು ಗಂಭೀರ್ ಹೇಳಿದರು.
ಇನ್ನು ದುಬೈ ಪಿಚ್ ನಮಗೆ ಅನುಕೂಲ ಎಂದು ಅವರು ಹೇಗೆ ಹೇಳಬಹುದು? ನಮ್ಮ ತಂಡ ಈ ಪಿಚ್ನಲ್ಲಿ ಅಭ್ಯಾಸ ಮಾಡಿಲ್ಲ. ನಮ್ಮವರು ಐಸಿಸಿ ಅಕಾಡೆಮಿ ಗ್ರೌಂಡ್ನಲ್ಲಿ ಮಾತ್ರ ಅಭ್ಯಾಸ ಮಾಡಿದ್ದಾರೆ ಮತ್ತು ಅಲ್ಲಿನ ಪರಿಸ್ಥಿತಿಗಳು ದುಬೈ ಮೈದಾನಕ್ಕಿಂತ ಬಹಳ ಭಿನ್ನವಾಗಿವೆ. ಕೆಲವರು ಟೀಕಿಸುವುದನ್ನು ತಮ್ಮ ವ್ಯವಹಾರವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಗಂಭೀರ್ ಅವರು ಟೀಕಾಕಾರರಿಗೆ ತಿರುಗೇಟು ನೀಡಿದರು.
ಎರಡನೇ ಸಮಿಫೈನಲ್ನಲ್ಲಿ ದಕ್ಷಿಣಾ ಆಫ್ರಿಕಾ ತಂಡವನ್ನು ಮಣಿಸಿ ನ್ಯೂಜಿಲೆಂಡ್ ತಂಡ ಫೈನಲ್‌ಗೇರುವುದರೊಂದಿಗೆ ಭಾರತಕ್ಕೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ 25 ವರ್ಷಗಳ ಹಿಂದಿನ ಲೆಕ್ಕ ಚುಕ್ತಾ ಮಾಡುವ ಅವಕಾಶ ಲಭಿಸಿದೆ. 2000ದ 2ನೇ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ (ಆಗ ಐಸಿಸಿ ನಾಕೌಟ್ ಕಪ್) ಫೈನಲ್‌ನಲ್ಲಿ ಭಾರತ ತಂಡ ಕಿವೀಸ್ ಎದುರು 4 ವಿಕೆಟ್‌ಗಳಿಂದ ಸೋತಿತ್ತು. ನಂತರ 2021ರಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲೂ ಭಾರತ ತಂಡ ನ್ಯೂಜಿಲೆಂಡ್ ಎದುರು ಸೋತಿತ್ತು. ಕಿವೀಸ್ ಗೆದ್ದಿರುವ 2 ಐಸಿಸಿ ಟೂರ್ನಿಗಳಲ್ಲೂ ಭಾರತ ವಿರುದ್ಧವೇ ಫೈನಲ್‌ನಲ್ಲಿ ಜಯಿಸಿದೆ. ಹೀಗಾಗಿ ರೋಹಿತ್ ಶರ್ಮ ಪಡೆ ಈ ಬಾರಿ ಎಚ್ಚರಿಕೆಯಿಂದ ಫೈನಲ್ ಆಡಬೇಕಿದೆ. ಕಳೆದ ವರ್ಷ ಟಿ20 ವಿಶ್ವಕಪ್ ಸೆಮೀಸ್‌ನಲ್ಲಿ ಕಿವೀಸ್ ತಂಡವನ್ನು ಮಣಿಸಿದ ವಿಶ್ವಾಸ ಭಾರತಕ್ಕಿದೆ. ಮಾರ್ಚ್ 9ರಂದು ದುಬೈ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. (ಏಜೆನ್ಸೀಸ್)