

Sonia Gandhi: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಶೂ ಎಸೆಯುವ ಯತ್ನದ ಬಗ್ಗೆ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಖಂಡಿಸಿದ್ದು, ಇದು ಕೇವಲ ಅವರ ಮೇಲಿನ ದಾಳಿಯಲ್ಲ. ದೇಶದ ಸಂವಿಧಾನದ ಮೇಲೆ ನಡೆದ ದಾಳಿ ಎಂದು ಕರೆದಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸೋನಿಯಾ ಗಾಂಧಿ, ಸುಪ್ರೀಂ ಕೋರ್ಟ್ನಲ್ಲಿಯೇ ಭಾರತದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳ ಮೇಲಿನ ದಾಳಿಯನ್ನು ಖಂಡಿಸಲು ಯಾವುದೇ ಪದಗಳು ಸಾಕಾಗುವುದಿಲ್ಲ. ಇದು ಅವರ ಮೇಲೆ ಮಾತ್ರವಲ್ಲ, ನಮ್ಮ ಸಂವಿಧಾನದ ಮೇಲೂ ನಡೆದ ದಾಳಿಯಾಗಿದೆ ಎಂದು ತಿಳಿಸಿದ್ದಾರೆ.
ಘಟನೆಯ ಹೊರತಾಗಿಯೂ ಸಿಜೆಐ ತುಂಬಾ ದಯೆಯಿಂದ ವರ್ತಿಸಿದ್ದಾರೆ. ರಾಷ್ಟ್ರವು ಅವರ ಜೊತೆ ಒಗ್ಗಟ್ಟಿನಿಂದ, ಆಳವಾದ ದುಃಖ ಮತ್ತು ಆಕ್ರೋಶದಿಂದ ನಿಲ್ಲಬೇಕು ಎಂದು ಕರೆ ನೀಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದು, ಇಂದು ಸುಪ್ರೀಂ ಕೋರ್ಟ್ನಲ್ಲಿ ಭಾರತದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳ ಮೇಲೆ ದಾಳಿ ಮಾಡುವ ಪ್ರಯತ್ನ ನಾಚಿಕೆಗೇಡು ಮತ್ತು ಅಸಹ್ಯಕರ. ಅರ್ಹತೆ, ಸಮಗ್ರತೆ ಹಾಗೂ ಪರಿಶ್ರಮದ ಮೂಲಕ ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆಗೆ ಏರಿದ ಹಾಲಿ ಮುಖ್ಯ ಸಿಜೆಐ ಅವರನ್ನು ಈ ರೀತಿ ಗುರಿಯಾಗಿಸಲಾಗಿದೆ.
ಸಂವಿಧಾನವನ್ನು ಎತ್ತಿಹಿಡಿಯಲು ಸಾಮಾಜಿಕ ಅಡೆತಡೆಗಳನ್ನು ಮುರಿದ ವ್ಯಕ್ತಿಯನ್ನು ಬೆದರಿಸುವ ಮತ್ತು ಅವಮಾನಿಸುವ ಪ್ರಯತ್ನವನ್ನು ಇದು ಪ್ರತಿಬಿಂಬಿಸುತ್ತದೆ. ಇಂತಹ ಬುದ್ದಿಹೀನ ಕೃತ್ಯವು ಕಳೆದ ದಶಕದಲ್ಲಿ ದ್ವೇಷ, ಮತಾಂಧತೆ ಮತ್ತು ಧರ್ಮಾಂಧತೆ ನಮ್ಮ ಸಮಾಜವನ್ನು ಹೇಗೆ ಆವರಿಸಿದೆ ಎಂಬುದನ್ನು ತೋರಿಸುತ್ತದೆ. ನಮ್ಮ ನ್ಯಾಯಾಂಗದ ಸುರಕ್ಷತೆ ಮತ್ತು ಭದ್ರತೆ ಅತ್ಯಂತ ಮುಖ್ಯ. ಬೆದರಿಕೆಯಲ್ಲ, ನ್ಯಾಯ ಮತ್ತು ತರ್ಕ ಮೇಲುಗೈ ಸಾಧಿಸಲಿ ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ನಲ್ಲಿ ನಡೆದಿದ್ದೇನು?
ಇಂದು(ಅ. 06) ಬೆಳಗ್ಗೆ 11 ಗಂಟೆ ಸುಮಾರಿಗೆ ಸಿಜೆಐ ಗವಾಯಿ ನೇತೃತ್ವದ ಪೀಠದ ಮುಂದೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ, ವಕೀಲರೊಬ್ಬರು ತಮ್ಮ ಶೂ ತೆಗೆದು "ಸನಾತನ ಕಾ ಅಪ್ಮಾನ್ ನಹಿ ಸಹೇಂಗೆ (ಸನಾತನ ಧರ್ಮದ ಅವಮಾನವನ್ನು ನಾವು ಸಹಿಸುವುದಿಲ್ಲ)" ಎಂದು ಕೂಗುತ್ತಾ ಅದನ್ನು ಎಸೆಯಲು ಪ್ರಯತ್ನಿಸಿದರು.
ತಕ್ಷಣ ಕೋರ್ಟ್ನ ಭದ್ರತಾ ಸಿಬ್ಬಂದಿ ಆರೋಪಿ ವಕೀಲನನ್ನು ಹಿಡಿದು ಕೋರ್ಟ್ನಿಂದ ಆಚೆ ಹಾಕಿತು. ಹಾಗೆಯೇ ಪೊಲೀಸರಿಗೆ ಒಪ್ಪಿಸಿದರು. ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಸಿಜೆಐ ಇಂತಹ ಘಟನೆಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. (ಏಜೆನ್ಸೀಸ್)