ಸಿಜೆಐ ಮೇಲೆ ಶೂ ಎಸೆಯುವ ಯತ್ನ: ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಬಹುದು: ಬಿ.ಆರ್.ಗವಾಯಿ ತಾಯಿ ಖಂಡನೆ| B R Gavai Mother

Untitled design - 2025-10-07T193412.537
Published on

B R Gavai Mother: ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಶೂ ಎಸೆಯುವ ಯತ್ನದ ಘಟನೆ ಸೋಮವಾರ(ಅ. 06) ನಡೆದಿದೆ. ತಕ್ಷಣ ಆರೋಪಿ ರಾಕೇಶ್ ಕಿಶೋರ್​ನನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.

ಇನ್ನೂ ಸಿಜೆಪಿ ಮೇಲೆ ಶೂ ಎಸೆಯುವ ಯತ್ನದ ಬಗ್ಗೆ ಬಿ.ಆರ್.ಗವಾಯಿ ತಾಯಿ ಡಾ.ಕಮಲ್ ತಾಯಿ ಗವಾಯಿ ಪ್ರತಿಕ್ರಿಯಿಸಿದ್ದು, ಘಟನೆಯನ್ನು ಖಂಡಿಸಿದ್ದಾರೆ. ಇಂತಹ ಘಟನೆಗಳು ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇಂದು (ಅ. 07) ಎಎನ್​ಐ ಜೊತೆ ಮಾತನಾಡಿರುವ ಅವರು, ಸಿಜೆಐ ಮೇಲೆ ಶೂ ಎಸೆಯುವುದನ್ನು ನಾನು ಖಂಡಿಸುತ್ತೇನೆ. ಭಾರತೀಯ ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡುತ್ತದೆ, ಆದರೆ ಕೆಲವರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ಭಾರತಕ್ಕೆ ಅಗೌರವ ತೋರುವ ರೀತಿಯಲ್ಲಿ ವರ್ತಿಸುತ್ತಾರೆ. ಇದು ದೇಶದಲ್ಲಿ ಅರಾಜಕತೆಯನ್ನು ಹರಡಬಹುದು. ಈ ದೇಶದಲ್ಲಿ ಯಾರಿಗೂ ಹೀಗೆ ಮಾಡುವ ಹಕ್ಕಿಲ್ಲ ಎಂದು ಹೇಳಿದ್ದಾರೆ.

ನಿಮ್ಮಲ್ಲಿರುವ ಯಾವುದೇ ಪ್ರಶ್ನೆಗಳನ್ನು ಕೇಳುತ್ತಿರೋ, ನೀವು ಏನು ಹೇಳಲು ಬಯಸುತ್ತೀರೋ ಅದನ್ನು ಶಾಂತಿಯುತವಾಗಿ ಎತ್ತುವಂತೆ ನಾನು ಎಲ್ಲರನ್ನೂ ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

ಸುಪ್ರೀಂಕೋರ್ಟ್​ನಲ್ಲಿ ನಡೆದಿದ್ದೇನು?

ಸೋಮವಾರ(ಅ. 06) ಬೆಳಗ್ಗೆ 11 ಗಂಟೆ ಸುಮಾರಿಗೆ ಸಿಜೆಐ ಗವಾಯಿ ನೇತೃತ್ವದ ಪೀಠದ ಮುಂದೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ, ವಕೀಲ ರಾಕೇಶ್ ಕಿಶೋರ್ ತಮ್ಮ ಶೂ ತೆಗೆದು ಸನಾತನ ಕಾ ಅಪ್ಮಾನ್ ನಹಿ ಸಹೇಂಗೆ (ಸನಾತನ ಧರ್ಮದ ಅವಮಾನವನ್ನು ನಾವು ಸಹಿಸುವುದಿಲ್ಲ) ಎಂದು ಕೂಗುತ್ತಾ ಅದನ್ನು ಎಸೆಯಲು ಪ್ರಯತ್ನಿಸಿದನು.

ತಕ್ಷಣ ಕೋರ್ಟ್​ನ ಭದ್ರತಾ ಸಿಬ್ಬಂದಿ ಆರೋಪಿ ವಕೀಲನನ್ನು ಹಿಡಿದು ಕೋರ್ಟ್​ನಿಂದ ಆಚೆ ಹಾಕಿತು. ಹಾಗೆಯೇ ಪೊಲೀಸರಿಗೆ ಒಪ್ಪಿಸಿದರು. ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಸಿಜೆಐ ಇಂತಹ ಘಟನೆಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net