

Mamata Banerjee: ನಿನ್ನೆ(ಅ. 06) ಪಶ್ಚಿಮ ಬಂಗಾಳದಲ್ಲಿ ಭೂಕುಸಿತದ ಪ್ರದೇಶಕ್ಕೆ ಭೇಟಿ ನೀಡಿದ್ದ ಬಿಜೆಪಿ ನಿಯೋಗದ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ಮಾಡಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಿಜೆಪಿ ಸಂಸದ ಖಗೇನ್ ಮುರ್ಮು ಅವರನ್ನು ಇಂದು(ಅ. 07) ಸಿಎಂ ಮಮತಾ ಬ್ಯಾನರ್ಜಿ ಸಿಲಿಗುರಿಯ ಖಾಸಗಿ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಆಸ್ಪತ್ರೆಯ ಹೊರಗೆ ಈ ಕುರಿತು ಮಾತನಾಡಿದ ಮಮತಾ ಬ್ಯಾನರ್ಜಿ, ಖಗೇನ್ ಅವರಿಗೆ ಯಾವುದೇ ಗಂಭೀರ ಸಮಸ್ಯೆಯಿಲ್ಲ. ನಾನು ವರದಿಯನ್ನು ನೋಡಿದ್ದೇನೆ. ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಿದೆ. ದಾಳಿಯ ಸಮಯದಲ್ಲಿ ಅವರ ಕಿವಿಯ ಹಿಂದೆ ಗಾಯವಾಗಿದೆ. ಅವರು ಬೇಗನೆ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ನಿನ್ನೆ ಸೋಮವಾರ ಪ್ರವಾಹ ಪೀಡಿತ ಪ್ರದೇಶದಲ್ಲಿ ಸ್ಥಳೀಯರೊಂದಿಗೆ ಮಾತನಾಡುತ್ತಿದ್ದಾಗ ದುಷ್ಕರ್ಮಿಗಳ ಗುಂಪೊಂದು ಖಗೇನ್ ಅವರ ಮೇಲೆ ದಾಳಿ ಮಾಡಿದೆ. ಈ ವೇಳೆ ಬಿಜೆಪಿ ಶಾಸಕ ಶಂಕರ್ ಘೋಷ್ ಅವರ ಮೇಲೂ ಹಲ್ಲೆ ನಡೆಸಲಾಗಿತ್ತು ಎನ್ನಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಮುರ್ಮು ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದ್ದು, ಅವರ ತಲೆಗೆ ತೀವ್ರ ಗಾಯಗಳಾಗಿವೆ. ಘಟನಾ ಸ್ಥಳದ ದೃಶ್ಯಗಳಲ್ಲಿ ಸಂಸದರು ತೀವ್ರ ರಕ್ತಸ್ರಾವವಾಗುತ್ತಿದ್ದು, ಅವರ ಮುಖ ಮತ್ತು ಬಟ್ಟೆಗಳು ರಕ್ತದಲ್ಲಿ ತೊಯ್ದಿದ್ದವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಇನ್ನು ದಾಳಿ ಘಟನೆಯ ಬಗ್ಗೆ ಆಡಳಿರೂಢ ಟಿಎಂಸಿನ ಗೂಂಡಾಗಳೆ ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಪ್ರತಿಯಾಗಿ ಟಿಎಂಸಿ ಘಟನೆಯನ್ನು ಖಂಡಿಸಿದ್ದು, ಬಿಜೆಪಿ ನಾಯಕರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರಚಾರಕ್ಕಾಗಿ ಬಿಕ್ಕಟ್ಟನ್ನು ಬಳಸಿಕೊಳ್ತಿದ್ದಾರೆ ಎಂದಿತ್ತು. (ಏಜೆನ್ಸೀಸ್)