ಐಷಾರಾಮಿ ಕಾರು ವಶಕ್ಕೆ ಪಡೆದ ವಿಚಾರ: ನಟ ದುಲ್ಕರ್​ ಸಲ್ಮಾನ್​ಗೆ ರಿಲೀಫ್​ ಕೊಟ್ಟ ಕೇರಳ ಹೈಕೋರ್ಟ್​ | Dulquer Salmaan

ವಿಜಯವಾಣಿ (41)
Published on

Dulquer Salmaan: 'ಆಪರೇಷನ್ ನಮ್ಖೋರ್' ಅಡಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿರುವ ತಮ್ಮ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ರಿಲೀಸ್​ ಮಾಡಲು ಹೈಕೋರ್ಟ್​ಗೆ ನಟ ದುಲ್ಕರ್ ಸಲ್ಮಾನ್​ ಸಲ್ಲಿಸಿದ್ದ ಅರ್ಜಿಯನ್ನು ಇಂದು ಕೇರಳ ಹೈಕೋರ್ಟ್​ ಆಲಿಸಿತು. ವಿಚಾರಣೆಯಲ್ಲಿ ವಾಹನ ಬಿಡುಗಡೆಗೆ ಕಸ್ಟಮ್ಸ್ ಕಾಯ್ದೆಯಡಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸಲ್ಮಾನ್‌ಗೆ ಹೇಳಿದ ಕೋರ್ಟ್​, ನಟನ ಅರ್ಜಿಯನ್ನು ಪರಿಶೀಲಿಸಿ, ಒಂದು ವಾರದೊಳಗೆ ಕಾರನ್ನು ರಿಲೀಸ್​ ಮಾಡಲು ಕಸ್ಟಮ್ಸ್​ಗೆ ಸೂಚಿಸಿದೆ. ಇದರೊಟ್ಟಿಗೆ ಕಾರನ್ನು ಬಿಡುಗಡೆ ಮಾಡಲು ನಿರಾಕರಿಸಿದರೆ, ಕಸ್ಟಮ್ಸ್ ಪ್ರಾಧಿಕಾರವು ತಾರ್ಕಿಕ ಆದೇಶವನ್ನು ಕೊಡಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿದೆ.

ಸೆ.23ರಂದು ತೆರಿಗೆ ವಂಚನೆ ಮಾಡಿ ಭೂತಾನ್‌ನಿಂದ ಭಾರತಕ್ಕೆ ಐಷಾರಾಮಿ ಕಾರುಗಳನ್ನು ತರಲಾಗಿದೆ ಎಂಬ ಗುಪ್ತಚರ ಮಾಹಿತಿಯ ಆಧಾರದ ಮೇಲೆ 'ಆಪರೇಷನ್ ನಮ್ಖೋರ್' ಅಡಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಮಾಲಯಾಳಂ ನಟ ದುಲ್ಕರ್ ಸಲ್ಮಾನ್ ಅವರಿಗೆ ಸಂಬಂಧಿಸಿದ ಮೂರು ಐಷಾರಾಮಿ ವಾಹನಗಳನ್ನು ಮೊದಲು ವಶಪಡಿಸಿಕೊಳ್ಳಲಾಯಿತು. ಅಲ್ಲದೆ, ಕೋಯಿಕ್ಕೋಡ್ ಮತ್ತು ಮಲಪ್ಪುರಂನಿಂದ 11 ವಾಹನಗಳನ್ನು ಸಹ ಸೀಜ್​ ಮಾಡಲಾಯಿತು. ಈ ಪ್ರಕರಣದ ವಿಚಾರಣೆ ಸದ್ಯ ಹೈಕೋರ್ಟ್​ ಮೆಟ್ಟಿಲೇರಿದ್ದು, ಕಸ್ಟಮ್ಸ್​ ಅಧಿಕಾರಿಗಳು ದುಲ್ಕರ್ ಸಲ್ಲಿಸಿರುವ ಅರ್ಜಿ ವಿರುದ್ಧ ಕಿಡಿಕಾರಿದ್ದಾರೆ.

ಐಷಾರಾಮಿ ಕಾರು ವಶಕ್ಕೆ ಪಡೆದ ವಿಚಾರ

"ಸಿನಿಮಾ ಎಕ್ಸ್​ಪ್ರೆಸ್​" ವರದಿ ಪ್ರಕಾರ, ಅಧಿಕಾರಿಗಳು ತನ್ನಿಂದ ವಶಪಡಿಸಿಕೊಂಡಿರುವ ಲ್ಯಾಂಡ್ ರೋವರ್ ಡಿಫೆಂಡರ್ ಅನ್ನು ಬಿಡುಗಡೆ ಮಾಡುವಂತೆ ದುಲ್ಕರ್ ಕೇರಳ ಹೈಕೋರ್ಟ್​ಗೆ​ ಅರ್ಜಿ ಸಲ್ಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಸ್ಟಮ್ಸ್ ಇಲಾಖೆ, ಅವರು (ದುಲ್ಕರ್​) ಹೈಕೋರ್ಟ್‌ ಮೊರೆ ಬರುವ ಮೊದಲು ಮೇಲ್ಮನವಿ ನ್ಯಾಯಮಂಡಳಿಯನ್ನು ಸಂಪರ್ಕಿಸಬೇಕಿತ್ತು ಎಂದು ಕೋರ್ಟ್​ನಲ್ಲಿ ವಾದಿಸಿದೆ.

ನಿಯಮ ಉಲ್ಲಂಘಿಸಿ ಆಮದು

ವಾಹನವನ್ನು ಭೂತಾನ್‌ನಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗಿದೆ ಮತ್ತು ಗುಪ್ತಚರ ವರದಿಯ ಆಧಾರದ ಮೇರೆಗೆ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಹೇಳಿದೆ. ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಆಮದು ಮಾಡಿಕೊಳ್ಳಲಾಗುತ್ತಿರುವ ಯಾವುದೇ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಾನೂನುಬದ್ಧ ಅಧಿಕಾರ ಇಲಾಖೆಗಿದೆ. ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ವಿವರಣೆಯನ್ನು ಕೋರಿ ಈಗಾಗಲೇ ದುಲ್ಕರ್‌ಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಟನ ಒಡೆತನದ ಇತರ ಎರಡು ವಾಹನಗಳಾದ ಟೊಯೋಟಾ ಲ್ಯಾಂಡ್ ಕ್ರೂಸರ್ ಮತ್ತು ನಿಸ್ಸಾನ್ ಅನ್ನು ಮೊದಲೇ ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ನ್ಯಾಯಾಲಯಕ್ಕೆ ತಿಳಿಸಿದೆ. ಈ ಮಧ್ಯೆ, ಭೂತಾನ್ ವಾಹನ ಕಳ್ಳಸಾಗಣೆ ಜಾಲದ ಬಗ್ಗೆ ವ್ಯಾಪಕ ತನಿಖೆ ಕೇರಳವನ್ನು ಮೀರಿ ವಿಸ್ತರಿಸಿದ್ದು, ಹಲವಾರು ವಾಹನಗಳನ್ನು ತಮಿಳುನಾಡು ಮತ್ತು ಕರ್ನಾಟಕಕ್ಕೆ ಸ್ಥಳಾಂತರಿಸಲಾಗಿದೆ ಎಂಬ ಸೂಚನೆಗಳಿವೆ. ಚೆನ್ನೈ ಮತ್ತು ಬೆಂಗಳೂರಿನ ಕಸ್ಟಮ್ಸ್ ಘಟಕಗಳ ಸಹಾಯದಿಂದ ಪ್ರಸ್ತುತ ವಿಚಾರಣೆಯನ್ನು ಕೈಗೊಳ್ಳಲಾಗಿದೆ. ದುಲ್ಕರ್ ಬಳಿ ಹೆಚ್ಚುವರಿ ವಾಹನಗಳಿವೆಯೇ ಎಂಬುದನ್ನು ನಮ್ಮ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಇಲಾಖೆ ಹೇಳಿದೆ.

ಕಸ್ಟಮ್ಸ್ ಸಂಶೋಧನೆಗಳ ಪ್ರಕಾರ, ಆಮದು ಸುಂಕವನ್ನು ಪಾವತಿಸದೆ ಸುಮಾರು 200 ವಾಹನಗಳನ್ನು ಭೂತಾನ್‌ನಿಂದ ಕೇರಳಕ್ಕೆ ತರಲಾಗಿದೆ. ಇವುಗಳಲ್ಲಿ 39 ವಾಹನಗಳನ್ನು ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾಗಿದೆ. ಮಾಲೀಕರು ಮರೆಮಾಚಿರುವ ವಾಹನಗಳನ್ನು ಪತ್ತೆಹಚ್ಚಲು ಕಸ್ಟಮ್ಸ್​ ಇಲಾಖೆ, ಕಳೆದ ಕೆಲವು ತಿಂಗಳುಗಳಿಂದ ಕೇರಳ ಪೊಲೀಸರ ಮೊರೆ ಹೋಗಿದೆ. ಮತ್ತು ಅಂದಿನಿಂದ ನಡೆಯುತ್ತಿರುವ ತನಿಖೆಗೆ ಸಹಾಯ ಮಾಡಲು ತಮಿಳುನಾಡು ಮತ್ತು ಕರ್ನಾಟಕದ ಪೊಲೀಸರೊಂದಿಗೆ ವಾಹನ ವಿವರಗಳನ್ನು ಹಂಚಿಕೊಂಡಿರುವುದಾಗಿ ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net