

ಬೆಂಗಳೂರು: ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತು ಕೊಟ್ಟಿರುವ ಮಾಹಿತಿಯನ್ನು ಸಿಎಲ್‌ಪಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಾಹಿತಿ ನೀಡಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಅವರಿಗೆ ನಿಖರವಾದ ಮಾಹಿತಿ ಇರುವುದರಿಂದಲೇ ಸಿಎಲ್‌ಪಿ ಸಭೆಯಲ್ಲಿ ಹೇಳಿದ್ದಾರೆ. ನಮ್ಮ ಎಚ್ಚರಿಕೆಯಲ್ಲಿ ಇರಬೇಕೆಂಬ ಸೂಚನೆ ನೀಡಿದ್ದಾರೆ.
ದೇವೇಗೌಡ, ಕುಮಾರಸ್ವಾಮಿ ಅವರು ಶಾ ಅವರಿಗೆ ಸರ್ಕಾರ ಬೀಳಿಸುವ ಮಾತು ಕೊಟ್ಟಿರಬಹುದು.
ಆದ್ದರಿಂದಲೇ ಕಳೆದ ಹಲವು ತಿಂಗಳಿನಿಂದ ಇಂತಹ ಪ್ರಯತ್ನಗಳು ನಡೆಯುತ್ತಿವೆ. ಹಿಂದೆಯೂ ಸಿಎಂ ಅವರು ಇದರ ಬಗ್ಗೆ ತಿಳಿಸಿದ್ದರು. ಯಾರು ಎಷ್ಟೇ ಪ್ರಯತ್ನ ಮಾಡಿದರೂ ಇನ್ನೂ ನಾಲ್ಕು ವರ್ಷ ಈ ಸರ್ಕಾರವನ್ನು ಬೀಳಿಸಲು ಸಾಧ್ಯವಾಗುವುದಿಲ್ಲವೆಂದರು.
ರಾಜ್ಯ ಸರ್ಕಾರದಲ್ಲಿಯೂ ಯಾವುದೇ ಬದಲಾವಣೆಗಳು ನಡೆಯುವುದಿಲ್ಲ. ಸಿಎಂ, ಡಿಸಿಎಂ ದೆಹಲಿ ಭೇಟಿ ವಿಚಾರದಲ್ಲಿ ಹೆಚ್ಚಿನ ಮಾಹಿತಿ ಇಲ್ಲ. ಬಹುತೇಕ ಇಲ್ಲಿ ನಡೆದಿರುವ ಬೆಳವಣಿಗೆಗಳನ್ನು ಹೈಕಮಾಂಡ್ ಗಮನಕ್ಕೆ ತರಲು ಹೋಗಿದ್ದಾರೆ ಅನ್ನಿಸುತ್ತಿದೆ ಎಂದು ಸತೀಶ್ ಜಾರಕಿಹೊಳಿ ತರ್ಕಿಸಿದರು.
ಪ್ರಾಸಿಕ್ಯೂಷನ್ ನಂತರ ಹೈಕಮಾಂಡ್ ತೀರ್ಮಾನ ಏನು ಎಂಬ ವಿಚಾರದ ಬಗ್ಗೆ ಯಾವುದೇ ಸ್ಪಷ್ಟನೆ ಬಂದಿಲ್ಲ. ಕೋರ್ಟ್‌ನಲ್ಲಿ ಆದೇಶ ಬಂದಮೇಲೆ ಮುಂದಿನ ತೀರ್ಮಾನ ಆಗಲಿದೆ. ಇಂಡಿಯಾ ಒಕ್ಕೂಟ ಏನು ತೀರ್ಮಾನ ಕೈಗೊಳ್ಳುತ್ತದೆ ನೋಡೋಣ. ಏಕೆಂದರೆ ಬೇರೆ ರಾಜ್ಯಗಳಲ್ಲಿಯೂ ರಾಜ್ಯಪಾಲರಿಂದ ಸರ್ಕಾರ ಅಸ್ಥಿರಗೊಳಿಸುವ ಕೆಲಸಗಳು ನಡೆಯುತ್ತಿವೆ ಎಂದರು.
ತಮಿಳುನಾಡು, ಪಶ್ಚಿಮ ಬಂಗಾಳ ಸೇರಿ ಹಲವು ರಾಜ್ಯಗಳಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳು ನಮ್ಮ ರಾಜ್ಯದಲ್ಲೂ ನಡೆಯುತ್ತಿವೆ. ರಾಜ್ಯಪಾಲರು ಕೆಲ ಬಿಲ್ಗಳನ್ನು ವಾಪಸ್ ಕಳಿಸಿದ್ದಾರೆ. ಅವರಿಗೆ ಸ್ಪಷ್ಟನೆ ಕೇಳುವ ಹಕ್ಕಿದೆ. ಅವರು ಕೇಳಿರುವ ಸ್ಪಷ್ಟನೆಗಳಿಗೆ ಸರ್ಕಾರ ಉತ್ತರ ನೀಡಲಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.