ಕಾರಿನೊಳಗೆ ಏಕಾಂತದಲ್ಲಿದ್ದ ಜೋಡಿ: ಪೊಲೀಸ್ ಅಧಿಕಾರಿ ಮೇಲೆಯೇ ಕಾರು ಹತ್ತಿಸಲು ಯತ್ನ

BNG Police
Published on

ಬೆಂಗಳೂರು: ಕಾರಿನೊಳಗೆ ಏಕಾಂತದಲ್ಲಿದ್ದ ಯುವಕ-ಯುವತಿಗೆ ಬುದ್ಧಿವಾದ ಹೇಳಲು ಮುಂದಾದ ಪೊಲೀಸ್ ಅಧಿಕಾರಿ ಮೇಲೆಯೇ ಕಾರು ಹತ್ತಿಸಲು ಯತ್ನಿಸಿರುವ ಘಟನೆ ನಡೆದಿದೆ.

ಜ.೨೦ರಂದು ಮಧ್ಯಾಹ್ನ ೩.೩೦ರ ಸುಮಾರಿಗೆ ಉಪಕಾರ ಲೇಔಟ್‌ನ ಮೂರನೇ ಮುಖ್ಯರಸ್ತೆಯ ಮೂರನೇ ಅಡ್ಡರಸ್ತೆಯ ಊರ್ವ ರೆಸಿಡೆನ್ಸಿ ಬಳಿ ಈ ಘಟನೆ ನಡೆದಿದೆ. ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಪಶ್ಚಿಮ ವಿಭಾಗದ ರಿಸರ್ವ್ ಸಬ್ ಇನ್‌ಸ್ಪೆಕ್ಟರ್(ಆರ್‌ಎಸ್‌ಐ) ಕೆ.ಮಹೇಶ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ನೀಡಿದ ದೂರಿನ ಮೇರೆಗೆ ಅಪರಿಚಿತ ಜೋಡಿಯ ವಿರುದ್ಧ ಕೊಲೆಗೆ ಯತ್ನ ಪ್ರಕರಣ ದಾಖಲಿಸಿ ಪತ್ತೆಗೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಪಕಾರ ಲೇಔಟ್ ನಿವಾಸಿ ಆರ್‌ಎಸ್‌ಐ ಮಹೇಶ್ ಜ.೨೦ರಂದು ಮಧ್ಯಾಹ್ನ ೩.೩೦ರ ಸುಮಾರಿಗೆ ಊಟ ಮುಗಿಸಿ ವಾಕಿಂಗ್ ಮಾಡಲು ಮನೆ ಎದುರಿನ ರಸ್ತೆಗೆ ಬಂದಿದ್ದಾರೆ. ಈ ವೇಳೆ ರಸ್ತೆಯ ಎಡಬದಿ ಬಿಳಿ ಬಣ್ಣದ ಕಾರೊಂದು ನಿಂತಿರುವುದು ಕಂಡು ಬಂದಿದೆ. ಏಳೆಂಟು ಹೆಜ್ಜೆ ಮುಂದೆ ಹೋಗಿ ಬಳಿಕ ಹಿಂದಿರುಗಿ ನೋಡಿದಾಗ ಆ ಕಾರಿನ ಹಿಂಬದಿ ಆಸನದಲ್ಲಿ ಯುವಕ-ಯುವತಿ ವಿವಸ್ತ್ರರಾಗಿರುವುದು ಕಂಡು ಬಂದಿದೆ. ಸಾರ್ವಜನಿಕ ರಸ್ತೆಯಲ್ಲಿ ಹಲವರು ವಾಕಿಂಗ್‌ಗೆ ಬರುವುದರಿಂದ ಯುವ ಜೋಡಿಗೆ ತಿಳಿ ಹೇಳಲು ಮಹೇಶ್ ಕಾರಿನ ಮುಂಭಾಗಕ್ಕೆ ಬಂದು ನೋಂದಣಿ ಸಂಖ್ಯೆ ನೋಡಲು ಕೆಳಗೆ ಬಗ್ಗಿದ್ದಾರೆ. ಆಗ ಕಾರಿನ ಹಿಂಬದಿ ಸೀಟಿನಲ್ಲಿದ್ದ ಯುವಕ ಚಾಲಕನ ಸೀಟಿಗೆ ಬಂದು ಏಕಾಏಕಿ ಕಾರು ಸ್ಟಾರ್ಟ್ ಮಾಡಿ ಮುಂದಕ್ಕೆ ಚಲಾಯಿಸಿ ಮಹೇಶ್ ಮೇಲೆ ಹತ್ತಿಸಲು ಪ್ರಯತ್ನಿಸಿದ್ದಾನೆ. ಅಷ್ಟರಲ್ಲಿ ಮಹೇಶ್ ಎಚ್ಚೆತ್ತುಕೊಂಡು ತಕ್ಷಣ ಕಾರಿನ ಬಾನೆಟ್ ಮೇಲೆ ಜಿಗಿದು ಬಿಗಿಯಾಗಿ ಹಿಡಿದುಕೊಂಡಿದ್ದಾರೆ.

ಕೆಳಗೆ ಬೀಳಿಸಿ ಪರಾರಿಯಾದ ಜೋಡಿ:
ಅಷ್ಟರಲ್ಲಿ ಯುವಕ ರಿವರ್ಸ್ ಗೇರ್‌ಗೆ ಹಾಕಿ ಕಾರನ್ನು ವೇಗವಾಗಿ ಹಿಮ್ಮುಖವಾಗಿ ಚಲಾಯಿಸಲು ಮುಂದಾಗಿದ್ದಾನೆ. ಮಹೇಶ್ ಅವರು ಕಾರು ನಿಲ್ಲಿಸುವಂತೆ ಕೂಗಿ ಕೊಂಡರೂ ಆತ ಕಾರು ನಿಲ್ಲಿಸಿಲ್ಲ. ಸ್ವಲ್ಪ ದೂರ ಚಲಿಸಿದ ಬಳಿಕ ಏಕಾಏಕಿ ಕಾರಿನ ಬ್ರೇಕ್ ಹಾಕಿದ್ದಾನೆ. ಈ ವೇಳೆ ಮಹೇಶ್ ಎಗರಿ ರಸ್ತೆಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಮೈ-ಕೈಗೆ ಗಾಯವಾಗಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ಆದರೂ ಆ ಯುವಕ ಕಾರು ನಿಲ್ಲಸದೆ ಪರಾರಿಯಾಗಿದ್ದಾನೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹೇಶ್ ಅವರನ್ನು ನೋಡಿದಾಗ ಸಾರ್ವಜನಿಕರು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಚಿಕಿತ್ಸೆ ಪಡೆದು ಮಹೇಶ್ ಚೇತರಿಸಿಕೊಂಡಿದ್ದಾರೆ. ಬಳಿಕ ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಾರು ಹಾಗೂ ಅದರ ಚಾಲಕನ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net